ವಾಷಿಂಗ್ಟನ್ ಡಿಸಿ (ಅಮೆರಿಕ): ದಕ್ಷಿಣ ಮೆಕ್ಸಿಕೊದ ಗೆರೆರೊ ರಾಜ್ಯಕ್ಕೆ ಓಟಿಸ್ ಚಂಡಮಾರುತ ಅಪ್ಪಳಿಸಿದ್ದರಿಂದ ಕನಿಷ್ಠ 48 ಜನರು ಸಾವನ್ನಪ್ಪಿದ್ದಾರೆ ಎಂದು ಗೆರೆರೊದ ಗವರ್ನರ್ ಎವೆಲಿನ್ ಸಲ್ಗಾಡೊ ಪಿನೆಡಾ ಹೇಳಿಕೆ ಆಧರಿಸಿ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಗೆರೆರೋ ಗವರ್ನರ್ ಫೇಸ್ಬುಕ್ನಲ್ಲಿ ಹಂಚಿಕೊಂಡ ಮಾಹಿತಿ ಪ್ರಕಾರ, ಚಂಡಮಾರುತಕ್ಕೆ 38 ಪುರುಷರು ಹಾಗೂ 10 ಮಹಿಳೆಯರು ಬಲಿಯಾಗಿದ್ದಾರೆ ಎಂದು ಪಿನೆಡಾ ಹೇಳಿದ್ದಾರೆ. ಚಂಡಮಾರುತದಿಂದ ಸಂಕಷ್ಟಕ್ಕೆ ಸಿಲುಕಿದ 340 ಜನರನ್ನು ರಕ್ಷಿಸಲಾಗಿದೆ ಎಂದು ಮೆಕ್ಸಿಕನ್ ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಬುಧವಾರ ಮಧ್ಯರಾತ್ರಿಯ ನಂತರ ಚಂಡಮಾರುತವು ಅಕಾಪುಲ್ಕೊ ಬಳಿ ಪ್ರತಿಗಂಟೆಗೆ 165 ಮೈಲಿ ವೇಗದಲ್ಲಿ ಬಿರುಗಾಳಿಯನ್ನು ತಂದಿದೆ. ಈ ಬಿರುಗಾಳಿಯ ಅಬ್ಬರಕ್ಕೆ ದಕ್ಷಿಣ ಮೆಕ್ಸಿಕೋ ಪ್ರವಾಸಿ ತಾಣ ನಾಶವಾಗಿದೆ. ಓಟಿಸ್ ಚಂಡಮಾರುತದಿಂದಾಗಿ 220,035 ಮನೆಗಳು ಹಾನಿಗೊಳಗಾಗಿವೆ. ಈ ಪ್ರವಾಸಿ ತಾಣದ ಶೇ 80 ಪ್ರತಿಶತದಷ್ಟು ಹೋಟೆಲ್‌ಗಳು ಹಾನಿಗೊಳಗಾಗಿವೆ. ಇಲ್ಲಿನ ಒಂದು ಆಸ್ಪತ್ರೆ ನೆಲಮಹಡಿ ಪ್ರವಾಹಕ್ಕೆ ಒಳಗಾಗಿದೆ. ಮತ್ತೊಂದು ಆಸ್ಪತ್ರೆಯಲ್ಲಿ ಎಲೆಕ್ಟ್ರೋಮೆಕಾನಿಕಲ್ ಉಪಕರಣಗಳು ಮತ್ತು ಔಷಧೀಯ ಅನಿಲ ಪೂರೈಕೆಯ ಮೇಲೆ ಪರಿಣಾಮ ಬೀರಿದೆ ಎಂದು ಅಧಿಕಾರಿಗಳು ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಚಂಡಮಾರುತದಿಂದಾಗಿ ದೊಡ್ಡ ದೊಡ್ಡ ಮರಗಳು ನೆಲಕ್ಕುರುಳಿದ್ದು, ಅಲ್ಲಲ್ಲಿ ಭೂಕುಸಿತಗಳು ಕೂಡಾ ವರದಿಯಾಗಿವೆ.
ಓಟಿಸ್ ಮಾಡಿದ ಅವಾಂತರ ಒಂದಲ್ಲ ಎರಡಲ್ಲ, ಭೂ ಕುಸಿತದಿಂದಾಗಿ ಹೆದ್ದಾರಿ ಸಂಚಾರ ಬಂದ್ ಆಗಿದೆ. ಅನೇಕ ರಸ್ತೆಗಳನ್ನು ಮುಚ್ಚಲಾಗಿದೆ. ಮೆಕ್ಸಿಕೋದ ಪೆಸಿಫಿಕ್ ಸಾಗರ ಪ್ರದೇಶದಲ್ಲಿ 27 ಸಂವೇದಕಗಳಿಗೆ ಹಾನಿಯಾಗಿದೆ. ಅಧಿಕಾರಿಗಳ ಪ್ರಕಾರ, ಅಕಾಪುಲ್ಕೊ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೂ ಹಾನಿಯಾಗಿದೆ. ಆದರೆ ತುರ್ತು ಕ್ರಮಗಳನ್ನು ಕೈಗೊಂಡು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮರು ಸ್ಥಾಪಿಸಲಾಗಿದೆ.
ಗೆರೆರೊದಲ್ಲಿ 5 ಲಕ್ಷ ಮನೆಗಳಲ್ಲಿ ಮತ್ತು ಉದ್ಯಮಗಳಲ್ಲಿ ವಿದ್ಯುತ್ ಸರಬರಾಜಿಗೆ ವ್ಯತ್ಯಯ ಉಂಟಾಗಿತ್ತು. ಭಾನುವಾರದ ವೇಳೆಗೆ ಅಕಾಪುಲ್ಕೊದಲ್ಲಿ ವಿದ್ಯುತ್ ಸರಬರಾಜನ್ನು ಮರುಸ್ಥಾಪಿಸಲಾಗಿದೆ ಎಂದು ಮೆಕ್ಸಿಕೋದ ಫೆಡರಲ್ ಇಲೆಕ್ಟ್ರಿಸಿಟಿ ಕಮಿಷನ್ ಹೇಳಿದೆ. ಚಂಡಮಾರುತದಿಂದ ಆಗಿರುವ ಹಾನಿಯನ್ನು ಸರಿಪಡಿಸಲು, ಸಂಕಷ್ಟದಲ್ಲಿರುವವರ ರಕ್ಷಣೆಗೆ ಸುಮಾರು 10,000 ಯೋಧರನ್ನು ಅಕಾಪುಲ್ಕೊ ಪ್ರದೇಶಕ್ಕೆ ನಿಯೋಜಿಸಲಾಗಿದೆ ಎಂದು ಗೆರೆರೊದ ಗವರ್ನರ್ ಹೇಳಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಓಟಿಸ್ ಚಂಡಮಾರುತದಿಂದ ಆಗಿರುವ ಅಪಾರ ಜೀವ ನಷ್ಟ ಮತ್ತು ವಿನಾಶದಿಂದ ತೀವ್ರ ದುಃಖಿತನಾಗಿದ್ದೇನೆ ಎಂದಿದ್ದಾರೆ. ನಾವು ಚಂಡಮಾರುತದಿಂದ ಆದ ಅನಾಹುತಗಳನ್ನು ಸರಿಪಡಿಸಲು, ಈ ಸಂಕಷ್ಟದ ಸಮಯದಲ್ಲಿ ನಾವು ನಿಮ್ಮೊಂದಿಗೆ ಇರುತ್ತೇನೆ ಎಂದು ಹೇಳಿದ್ದಾರೆ. (ANI)
ಇದನ್ನು ಓದಿ:ಇಸ್ರೇಲ್ - ಹಮಾಸ್ ಸಂಘರ್ಷ: ಗಾಜಾದಲ್ಲಿ ವಿಶ್ವ ಆರೋಗ್ಯ ಸಂಸ್ಥೆ, ಯುನಿಸೆಫ್ ಸಿಬ್ಬಂದಿಯ ಸಂಪರ್ಕ ಕಡಿತ