ಫಾರ್ಮಿಂಗ್ಟನ್ (ಅಮೆರಿಕ): ವಾಯುವ್ಯ ನ್ಯೂ ಮೆಕ್ಸಿಕೊದಲ್ಲಿ ಸೋಮವಾರ ಭೀಕರ ಗುಂಡಿನ ಕಾಳಗ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ ಮೂವರು ಸಾವನ್ನಪ್ಪಿದ್ದಾರೆ. ಸಾರ್ವಜನಿಕರಷ್ಟೇ ಅಲ್ಲ ಈ ದಾಳಿಯಲ್ಲಿ ಪೊಲೀಸರು ಕೂಡಾ ಗಾಯಗೊಂಡಿದ್ದಾರೆ. ಈ ನಡುವೆ ತಕ್ಷಣ ಎಚ್ಚೆತ್ತುಕೊಂಡ ಪೊಲೀಸರು ದುಷ್ಕರ್ಮಿಯನ್ನು ಗುಂಡಿಕ್ಕಿ ಕೊಂದಿದ್ದಾರೆ.
ಸುಮಾರು 50,000 ಜನರಿರುವ ನಗರವಾದ ಫಾರ್ಮಿಂಗ್‌ಟನ್‌ನಲ್ಲಿ ಬೆಳಗ್ಗೆ 11 ಗಂಟೆ ವೇಳೆ ದುಷ್ಕರ್ಮಿಯೊಬ್ಬ ಗುಂಡಿನ ಮಳೆಗರೆದಿದ್ದಾನೆ. ನಗರದ ಪೊಲೀಸ್ ಇಲಾಖೆ ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕನಿಷ್ಠ ಮೂವರು ಸಾರ್ವಜನಿಕರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಘಟನಾ ಸ್ಥಳಕ್ಕೆ ತಕ್ಷಣವೇ ಧಾವಿಸಿ ಬಂದಿದ್ದು, ಗುಂಡಿನ ದಾಳಿ ನಡೆಸಿದ ಶಂಕಿತನನ್ನು ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದಾರೆ. ಈ ದಾಳಿ ವೇಳೆ ಪೊಲೀಸ್ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರೆಲ್ಲ ಆರೋಗ್ಯವಾಗಿದ್ದಾರೆ ಎಂದು ನ್ಯೂ ಮೆಕ್ಸಿಕೋ ಪೊಲೀಸರು ಮಾಹಿತಿ ನೀಡಿದ್ದಾರೆ.
"ಶಂಕಿತ ದುಷ್ಕರ್ಮಿಯ ಗುರುತು ಗೊತ್ತಾಗಿಲ್ಲ ಈ ವ್ಯಕ್ತಿ ದಾಳಿ ಮಾಡಲು ಕಾರಣ ಏನು ಎಂಬುದು ಗೊತ್ತಾಗಿಲ್ಲ. ಇನ್ನು ಹತ್ಯೆಗೀಡಾದ ಅಥವಾ ಗಾಯಗೊಂಡವರ ಹೆಸರನ್ನು ಪೊಲೀಸರು ಬಿಡುಗಡೆ ಮಾಡಿಲ್ಲ. ಗುಂಡಿನ ದಾಳಿಗೆ ಕಾರಣವಾದ ಬಗ್ಗೆ ಇನ್ನೂ ವಿವರಗಳು ಲಭ್ಯವಾಗಿಲ್ಲ.
ದಾಳಿ ಬಗ್ಗೆ ಶಾಲಾ ಶಿಕ್ಷಕ ನಿಕ್ ಅಕಿನ್ಸ್ ಮಾತನಾಡಿದ್ದು, ದಾಳಿ ನಡೆದ ಸ್ಥಳ ಶಾಲೆ ಇರುವ ಪ್ರದೇಶವಾಗಿದೆ. ಇಲ್ಲಿ ಅಪಾರ್ಟ್ಮೆಂಟ್ಗಳು ಸೇರಿದಂತೆ ಜನನಿಬಿಡ ಪ್ರದೇಶವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಘಟನೆ ಬಗ್ಗೆ ಅಲ್ಲಿನ ಗವರ್ನರ್ ಮಿಚೆಲ್ ಲುಜಾನ್ ಗ್ರಿಶಮ್ ಕಳವಳ ವ್ಯಕ್ತಪಡಿಸಿದ್ದಾರೆ. ದಾಳಿಯಲ್ಲಿ ಮಡಿದವರ ಕುಟುಂಬಗಳಿಗೆ ಅವರು ಸಾಂತ್ವನ ಹೇಳಿದ್ದಾರೆ. ಮಡಿದವರ ಆತ್ಮಗಳಿಗೆ ಶಾಂತಿ ಹಾಗೂ ಕುಟುಂಬದವರಿಗೆ ಸಾವಿನ ನಷ್ಟ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವುದಾಗಿ ನ್ಯೂ ಮೆಕ್ಸಿಕೋ ಗವರ್ನರ್ ತಾವು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನಮ್ಮ ರಾಜ್ಯದಲ್ಲಿ ಮತ್ತು ದೇಶದಲ್ಲಿ ಪ್ರತಿ ದಿನವೂ ಗುಂಡಿನ ಮೊರೆತ ಜಾಸ್ತಿಯಾಗುತ್ತಿದೆ. ಈ ಹಿಂಸಾಚಾರ ಹೇಗೆ ಜನರ ಬದುಕನ್ನು ನಾಶಪಡಿಸುತ್ತದೆ ಎಂಬುದನ್ನು ಈ ಘಟನೆ ನೆನಪಿಸುತ್ತದೆ ಎಂದು ಮಿಚೆಲ್ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಯಾನ್ ಜುವಾನ್ ಕೌಂಟಿಯ ಶೆರಿಫ್ ಕಚೇರಿಯಲ್ಲಿ ಕೆಲಸ ಮಾಡುವ ಮೇಗನ್ ಮಿಚೆಲ್ ಮಾತನಾಡಿ, ಗುಂಡಿನ ದಾಳಿಯ ಬಗ್ಗೆ ಮುಕ್ತ ತನಿಖೆ ನಡೆಯುತ್ತಿದೆ ಮತ್ತು ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ತಮಗೆ ಗೊತ್ತಿಲ್ಲ ಎಂದಿದ್ದಾರೆ.
ನ್ಯೂ ಮೆಕ್ಸಿಕೋ ಕೊಲೊರಾಡೋ, ಉತಾಹ್ ಮತ್ತು ಅರಿಜೋನಾ ಗಡಿಯಲ್ಲಿ ಈ ಫಾರ್ಮಿಂಗ್ಟನ್ ನಗರವಿದೆ. ಇತ್ತೀಚಿನ ವರ್ಷಗಳಲ್ಲಿ, ಕೆಫೆಗಳು ಮತ್ತು ಬ್ರೂವರೀಸ್‌ಗಳು ಡೌನ್‌ಟೌನ್‌ನಲ್ಲಿ ದೊಡ್ಡ ಮಟ್ಟದಲ್ಲೇ ವ್ಯವಹಾರ ನಡೆಸುತ್ತಿವೆ. ಇಲ್ಲಿ ಬೆಳ್ಳಿಯ ಆಭರಣಗಳಿಂದ ಉಣ್ಣೆ ನೇಯ್ಗೆಗಳವರೆಗೆ ಸ್ಥಳೀಯ ಅಮೆರಿಕನ್ ಕರಕುಶಲ ಕರ್ಮಿಗಳು ಭರ್ಜರಿ ವ್ಯಾಪಾರ ಮಾಡುತ್ತಾರೆ. ಟ್ರಾವೆಲಿಂಗ್ ಬ್ರಾಡ್‌ವೇ ಶೋಗಳು ಈ ನಗರದಲ್ಲಿ ದೊಡ್ಡ ಮಟ್ಟದಲ್ಲಿ ನಡೆಯುತ್ತವೆ.
ಇದನ್ನು ಓದಿ: ಥೈಲ್ಯಾಂಡ್ ಚುನಾವಣಾ ಫಲಿತಾಂಶ.. ಮಿಲಿಟರಿ ಪಕ್ಷಗಳನ್ನು ಸೋಲಿಸಿದ ಪ್ರತಿಪಕ್ಷಗಳು