ಬೀಜಿಂಗ್: ಚೀನಾದಲ್ಲಿ ಮತ್ತೆ ಕಠಿಣ ಲಾಕ್ ಡೌನ್ ವಿಧಿಸಲಾಗಿದೆ. ಇದರಿಂದ ಜನರು ಸರ್ಕಾರದ ವಿರುದ್ಧ ಬೀದಿಗೆ ಇಳಿದಿದ್ದಾರೆ. ಕ್ಸಿ ಜಿನ್ಪಿಂಗ್ ಆಡಳಿತದ ವಿರುದ್ಧ ಜನ ಆಕ್ರೋಶಗೊಂಡಿದ್ದು, ಅವರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಅವರ ರಾಜೀನಾಮೆಗೂ ಆಗ್ರಹಿಸಿದ್ದಾರೆ.
ಚೀನಾದ ಕಮ್ಯುನಿಸ್ಟ್ ಪಕ್ಷದ ವಿರುದ್ಧವೂ ಜನತೆ ಘೋಷಣೆಗಳನ್ನು ಕೂಗಿದ್ದು, ಬೀಜಿಂಗ್ ಹಾಗೂ ನಾನ್ಜಿಂಗ್ನ ವಿವಿಗಳ ಕ್ಯಾಂಪಸ್ ಗಳಿಗೂ ಪ್ರತಿಭಟನೆ ಕಾವು ವ್ಯಾಪಿಸಿದೆ. ಇನ್ನು ಶಾಂಘೈನಲ್ಲಿಯೂ ಸಾವಿರಾರು ಮಂದಿ ಪ್ರತಿಭಟನಾಕಾರರು ಪೊಲೀಸರನ್ನೂ ಲೆಕ್ಕಿಸದೇ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗತೊಡಗಿದ್ದು, ಚೀನಾ ಅಧ್ಯಕ್ಷರು ತಮ್ಮ ಸ್ಥಾನದಿಂದ ಕೆಳಗಿಳಿಯಬೇಕು ಎಂದು ಆಗ್ರಹಿಸುತ್ತಿದ್ದಾರೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡುತ್ತಿವೆ.
ಕೋವಿಡ್-19 ನೀತಿಗಳಿಂದಾಗಿ ಇಲ್ಲಿನ ಜನ ರೋಸಿಹೋಗಿದ್ದು, ಆರ್ಥಿಕತೆ ಸ್ಥಿತಿ ಕುಗ್ಗಿದೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ಅತಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಇನ್ನು ಉರುಂಕಿ ಎಂಬ ಪ್ರದೇಶದಲ್ಲಿ ಜನರು ಲಾಕ್ಡೌನ್ನಲ್ಲಿದ್ದ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡು 10 ಮಂದಿ ಸಾವನ್ನಪ್ಪಿದ್ದರು. ಇದಕ್ಕೂ ಮುನ್ನ ಚೀನಾದ ಅತಿ ದೊಡ್ಡ ಐಫೋನ್ ತಯಾರಕ ಕಾರ್ಖಾನೆಯಲ್ಲಿ ಲಾಕ್ ಡೌನ್ ನೀತಿ ವಿರೋಧಿ ಪ್ರತಿಭಟನೆಗಳು ನಡೆದಿದ್ದವು.
ಇದನ್ನೂ ಓದಿ:ಚೀನಾದಲ್ಲಿ ಮತ್ತೆ ಹೆಚ್ಚಾದ ಕೋವಿಡ್; ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರಿಕೆ