ಹಾಂಗ್ ಕಾಂಗ್: ಚೀನಾದ ಬೃಹತ್ ಇ-ಕಾಮರ್ಸ್ ಕಂಪನಿ ಅಲಿಬಾಬಾ ಹೊಸ ಸಿಇಒ ಮತ್ತು ಅಧ್ಯಕ್ಷರನ್ನು ನೇಮಿಸಿದೆ. ಆರು ತಿಂಗಳ ಹಿಂದೆಯೇ ಚೀನಾ ತನ್ನ ಎಲ್ಲ ಕೋವಿಡ್ ನಿರ್ಬಂಧಗಳನ್ನು ತೆಗೆದುಹಾಕಿದೆ. ಇಷ್ಟಾದರೂ ದೇಶದ ಆರ್ಥಿಕತೆ ನಿಧಾನಗತಿಯಲ್ಲಿದೆ. ಇಂಥ ಸಮಯದಲ್ಲಿ ಅಲಿಬಾಬಾ ಪ್ರಮುಖ ಹುದ್ದೆಗಳಲ್ಲಿ ಬದಲಾವಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಸದ್ಯ ಕಂಪೆನಿಯ ಇ-ಕಾಮರ್ಸ್ ವಿಭಾಗದ ಅಧ್ಯಕ್ಷರಾದ ಎಡ್ಡಿ ವು ಅವರು ಕಂಪನಿಯ ಸಿಇಓ ಆಗಲಿದ್ದಾರೆ. ಈ ಮೊದಲು ಸಿಇಒ ಆಗಿದ್ದ ಡೇನಿಯಲ್ ಜಾಂಗ್ ಅವರ ಜಾಗದಲ್ಲಿ ಎಡ್ಡಿ ವು ಬರಲಿದ್ದಾರೆ ಎಂದು ಕಂಪನಿಯು ಮಂಗಳವಾರ ಹೇಳಿಕೆಯಲ್ಲಿ ತಿಳಿಸಿದೆ.
ಜಾಂಗ್ ಅವರು ಅಲಿಬಾಬಾದ ಕ್ಲೌಡ್ ಕಂಪ್ಯೂಟಿಂಗ್ ವಿಭಾಗದ ಸಿಇಒ ಮತ್ತು ಅಧ್ಯಕ್ಷರಾಗಿರುತ್ತಾರೆ. ಕಂಪೆನಿಯಿಂದ ಈ ವಿಭಾಗವನ್ನು ಬೇರ್ಪಡಿಸಲು ಅನುಮೋದಿಸಲಾಗಿದೆ ಮತ್ತು ಒಂದು ವರ್ಷದೊಳಗೆ ಇದನ್ನು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಲಾಗುವುದು ಎಂದು ನಿರೀಕ್ಷಿಸಲಾಗಿದೆ. ಅಲಿಬಾಬಾದ ಪ್ರಸ್ತುತ ಕಾರ್ಯನಿರ್ವಾಹಕ ಉಪಾಧ್ಯಕ್ಷರಾದ ಜೋಸೆಫ್ ತ್ಸೈ (Tsai) ಅವರು ಅಲಿಬಾಬಾ ಗ್ರೂಪ್‌ನ ಅಧ್ಯಕ್ಷರಾಗಿ ಜಾಂಗ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ತ್ಸೈ ಇವರು NBA ಬ್ಯಾಸ್ಕೆಟ್‌ಬಾಲ್ ತಂಡ ಬ್ರೂಕ್ಲಿನ್ ನೆಟ್ಸ್ ಇದರ ಮಾಲೀಕರು. ತ್ಸೈ ತೈವಾನ್ ಮೂಲದ ಕೆನಡಾದ ಪ್ರಜೆಯಾಗಿದ್ದು, 1990 ರ ದಶಕದ ಅಂತ್ಯದಲ್ಲಿ ಅಲಿಬಾಬಾ ಆರಂಭಿಸಲು ಸಹಾಯ ಮಾಡಿದ್ದರು.
ಹೊಸ ಬದಲಾವಣೆಗಳು ಸೆಪ್ಟೆಂಬರ್ 10ರಿಂದ ಜಾರಿಗೆ ಬರಲಿವೆ. ಜಾಂಗ್ 2015ರಲ್ಲಿ ಅಲಿಬಾಬಾ ಗ್ರೂಪ್‌ನ CEO ಆಗಿದ್ದರು ಮತ್ತು 2019 ರಲ್ಲಿ ಅಲಿಬಾಬಾ ಸಹ ಸಂಸ್ಥಾಪಕ ಜಾಕ್ ಮಾ ನಂತರ ಅಧ್ಯಕ್ಷರಾದರು. "ಮುಂಬರುವ ತಿಂಗಳುಗಳಲ್ಲಿ ತಡೆರಹಿತ ಪರಿವರ್ತನೆಯನ್ನು ಖಚಿತಪಡಿಸಿಕೊಳ್ಳಲು ಜೋ ಮತ್ತು ಎಡ್ಡಿ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ." ಎಂದು ಜಾಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಾರ್ಚ್‌ನಲ್ಲಿ ಅಲಿಬಾಬಾ ತನ್ನ ಪ್ರಮುಖ ಇ-ಕಾಮರ್ಸ್ ವ್ಯವಹಾರವನ್ನು ಹೊರತುಪಡಿಸಿ ಹೊರಗಿನ ಬಂಡವಾಳವನ್ನು ಸಂಗ್ರಹಿಸಲು ಮತ್ತು ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಆಗಲು ಹೊಸ ಯೋಜನೆಗಳನ್ನು ಹಾಕಿಕೊಂಡಿದೆ.
ಒಟ್ಟು ಸರಕುಗಳ ಪರಿಮಾಣ ಆಧಾರದಲ್ಲಿ ಅಲಿಬಾಬಾ ವಿಶ್ವದ ಅತಿದೊಡ್ಡ ಆನ್‌ಲೈನ್ ಮತ್ತು ಮೊಬೈಲ್ ವಾಣಿಜ್ಯ ಕಂಪೆನಿಯಾಗಿದೆ. Taobao, Tmall ಮತ್ತು Alibaba ಡಾಟ್ com ಇವು ಅಲಿಬಾಬಾದ ಮೂರು ಪ್ರಮುಖ ಅಂಗ ಸಂಸ್ಥೆಗಳಾಗಿವೆ. ಇವು ಒಟ್ಟಾರೆಯಾಗಿ ನೂರಾರು ಮಿಲಿಯನ್ ಬಳಕೆದಾರರನ್ನು ಹೊಂದಿದೆ ಮತ್ತು ಲಕ್ಷಾಂತರ ವ್ಯಾಪಾರಿಗಳು ಮತ್ತು ವ್ಯವಹಾರಗಳನ್ನು ನಿರ್ವಹಿಸುತ್ತವೆ. ಅಲಿಬಾಬಾ ಇತರ ಯಾವುದೇ ಇ-ಕಾಮರ್ಸ್ ಕಂಪನಿಗಳಿಗಿಂತ ಹೆಚ್ಚಿನ ವ್ಯವಹಾರವನ್ನು ನಿರ್ವಹಿಸುತ್ತದೆ.
ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಕಾಮರ್ಸ್ ಮಾರುಕಟ್ಟೆಯಲ್ಲಿ ಅಲಿಬಾಬಾ ಆನ್‌ಲೈನ್ ಶಾಪಿಂಗ್‌ನ ಅತ್ಯಂತ ಜನಪ್ರಿಯ ತಾಣವಾಗಿದೆ. ಅದರ ಆನ್‌ಲೈನ್ ಸೈಟ್‌ಗಳಲ್ಲಿನ ವಹಿವಾಟುಗಳು ಕಳೆದ ವರ್ಷ 248 ಶತಕೋಟಿ ಡಾಲರ್ ಆಗಿದ್ದು, ಇದು eBay ಮತ್ತು Amazon.com ಒಟ್ಟಾರೆ ವಹಿವಾಟಿಗಿಂತ ಹೆಚ್ಚಾಗಿದೆ.
ಇದನ್ನೂ ಓದಿ : ಕರಾಚಿ ಬಂದರು ಯುಎಇಗೆ ಹಸ್ತಾಂತರ: ಹಣಕ್ಕಾಗಿ ಪಾಕ್ ಸರ್ಕಾರದ ನಿರ್ಧಾರ