ಕರಾಚಿ: (ಪಾಕಿಸ್ತಾನ): ದುಬೈನಿಂದ ಪಂಜಾಬ್ನ ಅಮೃತಸರ್ಗೆ ಪ್ರಯಾಣಿಸುತ್ತಿದ್ದ IX-192 ಸಂಖ್ಯೆಯ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪ್ರಯಾಣಿಕರೊಬ್ಬರಿಗೆ ತುರ್ತು ವೈದ್ಯಕೀಯ ನೆರವಿನ ಅವಶ್ಯಕತೆ ಇತ್ತು.
ಹೀಗಾಗಿ ಭಾರತದ ಮನವಿಗೆ ಸ್ಪಂದಿಸಿದ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರವು ಕರಾಚಿಯಲ್ಲಿ ಏರ್ ಇಂಡಿಯಾ ವಿಮಾನಕ್ಕೆ ಲ್ಯಾಂಡ್ ಮಾಡಲು ಅವಕಾಶ ನೀಡಿದೆ. ತುರ್ತು ಅನುಮತಿಗೆ ನೀಡಿದ್ದಲ್ಲದೇ ವಿಮಾನ ನಿಲ್ದಾಣದಲ್ಲಿ ಅಗತ್ಯ ಸೌಲಭ್ಯಗಳನ್ನೂ ಕಲ್ಪಿಸಿಕೊಟ್ಟಿದೆ. ಅಕ್ಟೋಬರ್ 14 ರಂದು ಈ ಘಟನೆ ನಡೆದಿದ್ದು ಇದೀಗ ವರದಿಯಾಗುತ್ತಿದೆ.
''ದುಬೈ ಕಾಲಮಾನ ಪ್ರಕಾರ IX-192 ಸಂಖ್ಯೆಯ ವಿಮಾನ ಬೆಳಗ್ಗೆ 8.51ಕ್ಕೆ ಟೇಕ್ ಆಫ್ ಆಗಿತ್ತು. ನಿಗದಿಯಂತೆ ನೇರವಾಗಿ ಅಮೃತಸರಕ್ಕೆ ತೆರಳಬೇಕಿತ್ತು. ಆದರೆ, ಮಾರ್ಗ ಮಧ್ಯೆ ವಿಮಾನದಲ್ಲಿನ ಓರ್ವ ಪ್ರಯಾಣಿಕನ ಆರೋಗ್ಯದಲ್ಲಿ ಏರುಪೇರಾಗಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಸಿಬ್ಬಂದಿಗೆ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡುವ ಅವಶ್ಯಕತೆ ಎದುರಾಗಿತ್ತು. ಸಿಬ್ಬಂದಿ ಹತ್ತಿರದ ಯಾವುದಾದರೂ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡುವ ಆಲೋಚನೆಯಲ್ಲಿದ್ದರು.
ಆದರೆ, ಕರಾಚಿ ಹೊರತು ಹತ್ತಿರದಲ್ಲಿ ಬೇರೆ ಯಾವುದೇ ವಿಮಾನ ನಿಲ್ದಾಣ ಇರಲಿಲ್ಲ. ತುರ್ತು ಪರಿಸ್ಥಿತಿ ಮನಗಂಡ ಪಾಕಿಸ್ತಾನ ನಾಗರಿಕ ವಿಮಾನಯಾನ ಪ್ರಾಧಿಕಾರ, ಭಾರತೀಯ ವಿಮಾನಗಳು ತಮ್ಮ ವಾಯುಪ್ರದೇಶ ಪ್ರವೇಶಿಸಲು ಮತ್ತು ಕರಾಚಿಯಲ್ಲಿ ಇಳಿಯಲು ಅವಕಾಶ ಮಾಡಿಕೊಟ್ಟಿದೆ. ವಿಮಾನವು ಮಧ್ಯಾಹ್ನ 12.30ಕ್ಕೆ ಕರಾಚಿ ವಿಮಾನ ನಿಲ್ದಾಣದಲ್ಲಿ ಇಳಿದಿದೆ'' ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ಮಾಹಿತಿ ನೀಡಿದ್ದಾರೆ.
ಈ ವೇಳೆ ಪಾಕಿಸ್ತಾನ ವಾಯುಯಾನ ಪ್ರಾಧಿಕಾರವು ವಿಮಾನ ನಿಲ್ದಾಣದಲ್ಲಿಯೇ ಪ್ರಯಾಣಿಕನಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿದೆ. ವಿಮಾನ ಲ್ಯಾಂಡ್ ಆದ ಕೂಡಲೇ ವೈದ್ಯರ ತಂಡ ಪ್ರಯಾಣಿಕರನ್ನು ತಪಾಸಣೆ ನಡೆಸಿತು. ಬಳಿಕ ಮಧ್ಯಾಹ್ನ 2.30ಕ್ಕೆ ಭಾರತಕ್ಕೆ ತೆರಳಲು ವಿಮಾನಕ್ಕೆ ಅವಕಾಶ ನೀಡಲಾಯಿತು.
ಆರು ವರ್ಷಗಳ ಹಿಂದೆ ಭಾರತ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಂತರ ಪಾಕಿಸ್ತಾನವು ಭಾರತೀಯ ವಿಮಾನಗಳಿಗಾಗಿ ನಿಷೇಧ ಹೇರಿದೆ. ಅಂದಿನಿಂದ ಇಲ್ಲಿಯವರೆಗೆ ಭಾರತವು ಪಾಕಿಸ್ತಾನದ ವಾಯುಪ್ರದೇಶವನ್ನು ಬಳಸುತ್ತಿಲ್ಲ. ಆದರೆ, ಪರಿಸ್ಥಿತಿ ಅರಿತು ಪಾಕಿಸ್ತಾನವು ತನ್ನ ವಾಯುಪ್ರದೇಶವನ್ನು ನೀಡಿದೆ. ಅಂತಾರಾಷ್ಟ್ರೀಯ ನಿಯಮಗಳ ಪ್ರಕಾರ, ವೈದ್ಯಕೀಯ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಯಾವುದೇ ದೇಶವು ತನ್ನ ವಾಯು ಜಾಗವನ್ನು ನೀಡಲು ನಿರಾಕರಿಸುವಂತಿಲ್ಲ ಎಂಬ ನಿಯಮ ಕೂಡ ಇದೆ.
ಇದನ್ನೂ ಓದಿ: ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಜಮಾಮ್-ಉಲ್-ಹಕ್‌ಗೆ ಅದ್ಧೂರಿ ಸ್ವಾಗತ; ಹೇಳಿದ್ದೇನು ಗೊತ್ತೇ?