ಕಾಬೂಲ್ (ಅಫ್ಘಾನಿಸ್ತಾನ್) : ಪೇಶಾವರ ಮಸೀದಿ ಸ್ಫೋಟಕ್ಕೆ ಅಫ್ಘಾನಿಸ್ತಾನವನ್ನು ದೂಷಿಸಿದ್ದಕ್ಕಾಗಿ ತಾಲಿಬಾನ್ ಬುಧವಾರ ಪಾಕಿಸ್ತಾನ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಭಯೋತ್ಪಾದಕರು ನಡೆಸಿದ ಹತ್ಯಾಕಾಂಡಕ್ಕಾಗಿ ನೆರೆಯ ಅಫ್ಘಾನಿಸ್ತಾನವನ್ನು ದೂಷಿಸುವ ಬದಲು ಪೇಶಾವರ ದಾಳಿಯ ಬಗ್ಗೆ ತನಿಖೆ ನಡೆಸುವಂತೆ ತಾಲಿಬಾನ್‌ನ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಮುಟ್ಟಾಕಿ ಪಾಕಿಸ್ತಾನಕ್ಕೆ ಹೇಳಿದ್ದಾರೆ. ನಿಮ್ಮ ಸ್ವಂತ ವೈಫಲ್ಯಗಳಿಗೆ ಇತರರನ್ನು ದೂಷಿಸಬೇಡಿ ಎಂದು ತಾಲಿಬಾನ್ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ. ಜನವರಿ 30 ರಂದು ಪೇಶಾವರದ ಪೊಲೀಸ್ ಲೈನ್ಸ್ ಪ್ರದೇಶದ ಮಸೀದಿಯೊಂದರಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಕನಿಷ್ಠ 101 ಜನ ಬಲಿಯಾಗಿದ್ದಾರೆ. ಮೃತರಲ್ಲಿ ಹೆಚ್ಚಿನವರು ಪೊಲೀಸ್ ಅಧಿಕಾರಿಗಳು ಎಂಬುದು ಗಮನಾರ್ಹ.
ಭಯೋತ್ಪಾದಕ ದಾಳಿಗೆ ಕಾಬೂಲ್ ಅನ್ನು ದೂಷಿಸುವ ಬದಲು ದಾಳಿಯ ಬಗ್ಗೆ ತನಿಖೆ ನಡೆಸುವಂತೆ ಪಾಕಿಸ್ತಾನಕ್ಕೆ ಕರೆ ನೀಡಿದ ವಿದೇಶಾಂಗ ಸಚಿವ ಮುಟ್ಟಾಕಿ, ಅಫ್ಘಾನಿಸ್ತಾನವು ಭಯೋತ್ಪಾದಕರಿಗೆ ಸುರಕ್ಷಿತ ಅಡಗುತಾಣವಲ್ಲ ಎಂದು ಹೇಳಿದರು. ಅಫ್ಘಾನಿಸ್ತಾನವು ಭಯೋತ್ಪಾದನೆಯ ಕೇಂದ್ರವಾಗಿದ್ದರೆ ಭಯೋತ್ಪಾದನೆಯು ಚೀನಾ, ಮಧ್ಯ ಏಷ್ಯಾ ಮತ್ತು ಇರಾನ್ ದೇಶಗಳಿಗೂ ಹರಡುತ್ತಿತ್ತು ಎಂದು ಅವರು ಹೇಳಿದರು. ಪಾಕಿಸ್ತಾನಿ ಅಧಿಕಾರಿಗಳು ತಮ್ಮ ಭದ್ರತಾ ಸವಾಲುಗಳಿಗೆ ಸ್ಥಳೀಯವಾಗಿ ಪರಿಹಾರ ಕಂಡುಕೊಳ್ಳಬೇಕು ಮತ್ತು ಎರಡು ದೇಶಗಳ ಮಧ್ಯೆ ದ್ವೇಷದ ಬೀಜ ಬಿತ್ತುವುದನ್ನು ನಿಲ್ಲಿಸಬೇಕು ಎಂದು ರಾಜಧಾನಿ ಕಾಬೂಲ್‌ನಲ್ಲಿ ನಡೆದ ಸಭೆಯೊಂದರಲ್ಲಿ ಮಟ್ಟಾಕಿ ಹೇಳಿದರು.
ಪೇಶಾವರ ಮಸೀದಿಯಲ್ಲಿ ಸಂಭವಿಸಿದ ಭಯೋತ್ಪಾದಕ ದಾಳಿಗೆ ಪಾಕಿಸ್ತಾನಿ ಅಧಿಕಾರಿಗಳು ತೆಹ್ರಿಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಎಂದೂ ಕರೆಯಲ್ಪಡುವ ಪಾಕಿಸ್ತಾನಿ ತಾಲಿಬಾನ್ ಅನ್ನು ದೂಷಿಸಿದ್ದಾರೆ. ಮಸೀದಿಯಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯು ಅಫ್ಘಾನಿಸ್ತಾನದಿಂದ ನೆಲದಿಂದ ಬಂದಿದೆ ಎಂದು ಆರೋಪಿಸಿದ್ದಾರೆ. ಸ್ಫೋಟದಿಂದ ಉಂಟಾದ ದೊಡ್ಡ ಪ್ರಮಾಣದ ವಿನಾಶದ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ವಿಮರ್ಶಕರು ಎತ್ತುತ್ತಿರುವ ಅನುಮಾನಗಳು ಮತ್ತು ಪ್ರಶ್ನೆಗಳ ಬಗ್ಗೆ ಮಾತನಾಡಿದ ಮುಟ್ಟಾಕಿ, ನಮ್ಮ ಭೂಮಿಯನ್ನು ಯುದ್ಧ ಮತ್ತು ಬಾಂಬ್ ಸ್ಫೋಟಗಳಿಗೆ ಬಳಸಲಾಗುತ್ತದೆ ಎಂಬುದು ನಿಜ. ಆದರೆ ಕಳೆದ 20 ವರ್ಷಗಳಲ್ಲಿ ಆತ್ಮಾಹುತಿ ಬಾಂಬರ್ ಒಬ್ಬ ಏಕಾಂಗಿಯಾಗಿ ಮಸೀದಿಯನ್ನು ಸ್ಫೋಟಿಸಿ ನೂರಾರು ಜನರನ್ನು ಕೊಂದಿದ್ದು ನೋಡಿರಲಿಲ್ಲ ಎಂದರು.
ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಅಮೆರಿಕದಿಂದ ಘೋಷಿಸಲ್ಪಟ್ಟಿರುವ ಟಿಟಿಪಿ, ಪಾಕಿಸ್ತಾನದಲ್ಲಿ ಬಹಳ ಹಿಂದಿನಿಂದಲೂ ದೊಡ್ಡ ಪ್ರಮಾಣದ ಭಯೋತ್ಪಾದಕ ದಾಳಿಗಳನ್ನು ನಡೆಸುತ್ತಿದೆ ಮತ್ತು ಅದರ ನಾಯಕತ್ವವು ಅಫ್ಘಾನ್ ಕಣಿವೆಗಳಿಂದ ಹಿಂಸಾಚಾರವನ್ನು ನಿರ್ದೇಶಿಸುತ್ತಿದೆ ಎಂದು ಆರೋಪಿಸಲಾಗಿದೆ. ಆದರೆ ಪಾಕಿಸ್ತಾನಿ ತಾಲಿಬಾನ್ ತನಗೂ ಇದಕ್ಕೂ ಸಂಬಂಧವಿಲ್ಲ ಎಂದು ಆರೋಪಗಳನ್ನು ತಳ್ಳಿ ಹಾಕಿದೆ. ತೆಹ್ರೀಕ್ ಎ ತಾಲಿಬಾನ್ ಪಾಕಿಸ್ತಾನ್ ಸಂಘಟನೆಯು ಇತ್ತೀಚೆಗೆ ಪಾಕಿಸ್ತಾನದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳ ಹೊಣೆ ಹೊತ್ತುಕೊಂಡಿರುವುದರಿಂದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳ ದ್ವಿಪಕ್ಷೀಯ ಸಂಬಂಧದಲ್ಲಿ ಬಿರುಕು ಮೂಡಿದೆ. ಅಫ್ಘಾನಿಸ್ತಾನ ಮೂಲದಿಂದ ಬರುತ್ತಿರುವ ಭಯೋತ್ಪಾದನಾ ದಾಳಿಗಳನ್ನು ತಡೆಗಟ್ಟುವುದು ಹೇಗೆ ಎಂಬ ಬಗ್ಗೆ ಪಾಕಿಸ್ತಾನ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಇದನ್ನೂ ಓದಿ: ಪಾಕಿಸ್ತಾನದಲ್ಲಿ ಆತ್ಮಾಹುತಿ ದಾಳಿ; ಸಾವಿನ ಸಂಖ್ಯೆ 90ಕ್ಕೆ ಏರಿಕೆ.. ಸ್ಮಶಾನವಾದ ಪೇಶಾವರ ಮಸೀದಿ