ಟೋಕಿಯೋ/ನವದೆಹಲಿ: ಜಪಾನ್‌ನ ಮಾಜಿ ಪ್ರಧಾನಿ ಶಿಂಜೊ ಅಬೆ ಹತ್ಯೆ ಪ್ರಕರಣದ ಆರೋಪಿ ಬಗ್ಗೆ ಹಲವು ಮಾಹಿತಿಗಳು ಇದೀಗ ಲಭ್ಯವಾಗಿವೆ. ಅಲ್ಲದೇ, ಇದೇ ವೇಳೆ ಭದ್ರತಾ ವೈಲಫ್ಯದ ಕುರಿತು ಚರ್ಚೆಗಳನ್ನೂ ಅಬೆ ಅವರ ಕೊಲೆ ಪ್ರಕರಣ ಹುಟ್ಟುಹಾಕಿದೆ.
ದಕ್ಷಿಣ ಜಪಾನ್‌ನ ನಾರಾ ನಗರದಲ್ಲಿ ಜುಲೈ 8ರಂದು ಬೆಳಗ್ಗೆ ಸುಮಾರು 11.30ಕ್ಕೆ ಹಾಡಹಗಲೇ ಮಾಜಿ ಪ್ರಧಾನಿ ಶಿಂಜೊ ಅಬೆ ಅವರ ಮೇಲೆ ಗುಂಡಿನ ದಾಳಿ ಮಾಡಿ ಕೊಲೆ ಮಾಡಿರುವುದು ಇಡೀ ಜಗತ್ತಿನಲ್ಲೇ ತಲ್ಲಣ ಉಂಟು ಮಾಡಿದೆ. ಈಗಾಗಲೇ ಹಂತಕ ಟೆಟ್ಸುಯಾ ಯಮಗಾಮಿ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಈತನ ಕುರಿತ ಹಲವು ರಹಸ್ಯಗಳು ಸಹ ಬಯಲಿಗೆ ಬಂದಿವೆ.
ಹಂತಕ ಟೆಟ್ಸುಯಾ ಯಮಗಾಮಿ ನೌಕಾಪಡೆಯ ಮಾಜಿ ನೌಕರನಾಗಿದ್ದು, 2005ರವರೆಗೆ ಜಪಾನ್‌ನ ಮಾರಿಟೈಮ್ ಸೆಲ್ಫ್ ಡಿಫೆನ್ಸ್ ಫೋರ್ಸ್‌ನಲ್ಲಿ ಕೆಲಸ ಮಾಡಿದ್ದ. ನಾರಾದ ನಿವಾಸಿಯಾದ ಯಮಗಾಮಿ ಅತ್ಯಂತ ಸಮೀಪದಿಂದಲೇ ಅಬೆ ಅವರನ್ನು ಕೊಲೆ ಮಾಡಿದ್ದಾನೆ. ಅಬೆ ಹಾಗೂ ಹಂತಕ ಹಿಡಿದ್ದ ಗನ್ ನಡುವೆ ಕೇವಲ 5 ಸೆಂಟಿ ಮೀಟರ್ ದೂರದ ಅಂತರ ಮಾತ್ರವೇ ಇತ್ತು. ನೇರವಾಗಿ ಕುತ್ತಿಗೆಗೆ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ಹೊರಬಿದ್ದಿದೆ.
ಭದ್ರತೆ ಬಗ್ಗೆ ಎದ್ದ ಅನುಮಾನುಗಳು: ಶಿಂಜೊ ಅಬೆ ಅನಾರೋಗ್ಯದ ಕಾರಣದಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೂ, ಅವರು ಜಪಾನ್‌ನ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಿ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಟ್ಟವರು. ವೈಯಕ್ತಿಕ ಸುರಕ್ಷತೆಯನ್ನು ಖಾತ್ರಿಪಡಿಸಲು ಹಲವು ಸುತ್ತಿನ ಭದ್ರತೆಯನ್ನು ಹೊಂದಿದ್ದರು. ಅಲ್ಲದೇ, ಜಪಾನ್ನಲ್ಲಿ ಅತ್ಯಂತ ಕಠಿಣ ಗನ್ ನಿಯಂತ್ರಣ ಕಾನೂನುಗಳು ಸಹ ಜಾರಿಯಲ್ಲಿವೆ.
ಇದರ ನಡುವೆಯೂ ನೌಕಾಪಡೆಯ ಮಾಜಿ ನೌಕರನಾದ ಹಂತಕ ಅಬೆ ಅವರ ಸಮೀಪ ಹೇಗೆ ಬಂದ?. ಅದರಲ್ಲೂ, ಒಂದು ಮೀಟರ್‌ಗಿಂತ ಕಡಿಮೆ ಅಂತರದಲ್ಲೇ ಹೇಗೆ ಪ್ರವೇಶಿಸಿದ ಹಾಗೂ ಯಾರ ಗಮನಕ್ಕೂ ಬಾರದೆ ಕುತ್ತಿಗೆಯವರೆಗೆ ಗನ್ ಹೇಗೆ ಹಿಡಿದು ತಂದ ಎಂಬ ಅನುಮಾನಗಳು ಈಗ ಎದ್ದಿವೆ.
ಗನ್ ಕುರಿತ ಅನುಮಾನುಗಳು: ಅಬೆ ಕೊಲೆಗೆ ಬಳಸಿದ ಗನ್ ಕೂಡ ಈಗ ಚರ್ಚೆಯ ವಿಷಯವಾಗಿದೆ. ಹಂತಕನು ಮನೆಯಲ್ಲೇ ತಯಾರಿಸಿದ ಗನ್ ಬಳಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಡಬಲ್ ಬ್ಯಾರೆಲ್ ಗನ್ ರೀತಿ ಇರುವ ಇದು, ಎರಡು ಸಿಲಿಂಡರಾಕಾರದ ಲೋಹದ ಬ್ಯಾರೆಲ್‌ಗಳನ್ನು ಕಪ್ಪು ಟೇಪ್‌ನಲ್ಲಿ ಸುತ್ತಿದ ಆಯುಧದಂತೆ ಕಾಣಿಸುತ್ತಿದೆ. ಈ ಗನ್ 40 ಸೆಂಟಿಮೀಟರ್ ಉದ್ದ ಮತ್ತು 20 ಸೆಂಟಿ ಮೀಟರ್ ಅಗಲ ಎಂದು ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ, ಹಂತಕ ಯಮಗಾಮಿ ವಾಸವಿದ್ದ ಸ್ಥಳದಲ್ಲಿ ಕೂಡ ಹಲವಾರು ಸಂಭವನೀಯ ಸ್ಫೋಟಕ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಯ ಪರಿಶೀಲನೆಯ ವೇಳೆ ಯಮಗಾಮಿ ರೈಲಿನಲ್ಲಿ ಬಂದಿಳಿದಿರುವ ದೃಶ್ಯಗಳು ಸೆರೆಯಾಗಿವೆ. ಅಲ್ಲದೇ, ಘಟನೆಯ ನಂತರ ಹಂತಕನು ಓಡಿಹೋಗಲು ಅಥವಾ ತಪ್ಪಿಸಿಕೊಳ್ಳಲು ಯಾವುದೇ ಪ್ರಯತ್ನವನ್ನು ಮಾಡಲಿಲ್ಲ. ಹೀಗಾಗಿ ಇದೊಂದು ಯೋಜಿತ ದಾಳಿಯಾಗಿದೆ ಎಂಬ ಚರ್ಚೆಗಳು ಸಹ ಶುರುವಾಗಿವೆ.
ಇದನ್ನೂ ಓದಿ: ಗುಂಡಿನ ದಾಳಿಗೊಳಗಾದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಇನ್ನಿಲ್ಲ