ಕೊಲಂಬೊ: ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ಇಂಧನ ಕೊರತೆ ವಿಪರೀತವಾಗಿದೆ. ವಾರಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಪೆಟ್ರೋಲ್, ಡೀಸೆಲ್ ಪಡೆಯಬೇಕಿದೆ. ಹೀಗೆ ಸರತಿಯಲ್ಲಿ 5 ದಿನಗಳಿಂದ ಕಾದಿದ್ದ ವ್ಯಕ್ತಿಯೊಬ್ಬ ತನ್ನ ವಾಹನದಲ್ಲೇ ಮೃತಪಟ್ಟಿದ್ದಾನೆ. ಇದು ಇಂಧನಕ್ಕಾಗಿ ಕಾದು ಮೃತಪಟ್ಟ 10ನೇ ಸಾವು ಎಂಬುದು ಆಘಾತಕಾರಿ ಸುದ್ದಿ.
ದೇಶದ ಪಶ್ಚಿಮ ಪ್ರಾಂತ್ಯದ ಪೆಟ್ರೋಲ್ ಬಂಕ್ ಬಳಿ 63 ವರ್ಷದ ವ್ಯಕ್ತಿಯೊಬ್ಬ 5 ದಿನಗಳಿಂದ ಸರದಿಯಲ್ಲಿ ಕಾದಿದ್ದ. ಈ ವೇಳೆ ವ್ಯಕ್ತಿ ತನ್ನ ವಾಹನದೊಳಗೆ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸರತಿ ಸಾಲಿನಲ್ಲಿ ಕಾದು ಸಾವನ್ನಪ್ಪಿದವರ ಸಂಖ್ಯೆ 10ಕ್ಕೇರಿದೆ. ಎಲ್ಲರೂ 43 ರಿಂದ 84 ವರ್ಷ ವಯಸ್ಸಿನವರು. ಹೆಚ್ಚಿನ ಸಾವುಗಳು ಹೃದಯ ಸ್ತಂಭನದಿಂದ ಸಂಭವಿಸಿವೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ವಾರದ ಹಿಂದೆ 53 ವರ್ಷದ ವ್ಯಕ್ತಿಯೊಬ್ಬರು ಕೊಲಂಬೊದ ಪಾನದುರಾದ ಇಂಧನ ಕೇಂದ್ರದಲ್ಲಿ ಹಲವಾರು ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾಯುತ್ತಿದ್ದಾಗ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ದೇಶದಲ್ಲಿ ಇಂಧನ ಕೊರತೆ ತೀವ್ರವಾಗಿದ್ದು, ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಹೆಚ್ಚಿನ ರಜಾದಿನಗಳನ್ನು ಘೋಷಿಸಲಾಗಿದೆ. ಅಲ್ಲದೇ, ಈಗಾಗಲೇ ಶಾಲಾ ಕಾಲೇಜುಗಳಿಗೆ ಪೂರ್ಣ ರಜೆ ನೀಡಿ, ಆನ್ಲೈನ್ ತರಗತಿಗಳನ್ನು ನಡೆಸಲು ಸೂಚಿಸಲಾಗಿದೆ. ಶ್ರೀಲಂಕಾದ ಒಟ್ಟು ವಿದೇಶಿ ಸಾಲವು 51 ಬಿಲಿಯನ್ ಡಾಲರ್ ಇದೆ.
ಇದನ್ನೂ ಓದಿ: ಅಫ್ಘಾನಿಸ್ತಾನದ ಭೂಕಂಪ.. 30 ಪಾಕಿಸ್ತಾನಿ ಬುಡಕಟ್ಟು ಜನರ ಸಾವು