ಕೇಪ್ ಟೌನ್(ದಕ್ಷಿಣ ಆಫ್ರಿಕಾ): ಪೂರ್ವ ದಕ್ಷಿಣ ಆಫ್ರಿಕಾದ ನಗರವಾದ ಡರ್ಬನ್ ಬಳಿಯ ಪುರುಷರ ಹಾಸ್ಟೆಲ್‌ನ ಕೊಠಡಿಯೊಂದಕ್ಕೆ ಏಕಾಏಕಿ ನುಗ್ಗಿದ ಬಂದೂಕುಧಾರಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ದೇಶದಲ್ಲಿ ನಡೆದ ಇತ್ತೀಚಿನ ಸಾಮೂಹಿಕ ಗುಂಡಿನ ದಾಳಿ ಇದಾಗಿದೆ. ಶನಿವಾರ ಮುಂಜಾನೆ ನಡೆದ ಗುಂಡಿನ ದಾಳಿಯಲ್ಲಿ ಮೊದಲು ಏಳು ಮಂದಿ ಪುರುಷರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. 8ನೇ ವ್ಯಕ್ತಿ ಭಾನುವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಿಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಗಾಯಗೊಂಡವರಲ್ಲಿ ಗುಂಡೇಟಿನಿಂದ ತಪ್ಪಿಸಿಕೊಳ್ಳಲು ಹಾಸ್ಟೆಲ್ ಕೋಣೆಯ ಕಿಟಕಿಯಿಂದ ಹೊರಗೆ ಹಾರಿದ ವ್ಯಕ್ತಿಯೂ ಸೇರಿದ್ದಾರೆ. ಕೊಠಡಿಯಲ್ಲಿ 12 ಮಂದಿ ಮದ್ಯ ಸೇವಿಸುತ್ತಿದ್ದರು. ಅವರಲ್ಲಿ ಇಬ್ಬರು ವ್ಯಕ್ತಿಗಳು ಗಾಯಗೊಂಡಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವದಲ್ಲಿ ಅತಿ ಹೆಚ್ಚು ನರಹತ್ಯೆ ಪ್ರಮಾಣವಿರುವ 10 ದೇಶಗಳಲ್ಲಿ ದಕ್ಷಿಣ ಆಫ್ರಿಕಾವೂ ಸೇರಿದೆ. ಇತ್ತೀಚಿನ ವರ್ಷಗಳಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ನಡೆಯುತ್ತಿವೆ. ಈ ವರ್ಷದ ಆರಂಭದಲ್ಲಿ ಕನಿಷ್ಠ ಎರಡು ಸಾಮೂಹಿಕ ಗುಂಡಿನ ದಾಳಿಗಳು ವರದಿಯಾಗಿವೆ. ಏಪ್ರಿಲ್‌ನಲ್ಲಿ ಮನೆಯೊಂದರಲ್ಲಿ ಕೊಲ್ಲಲ್ಪಟ್ಟ 10 ಕುಟುಂಬ ಸದಸ್ಯರಲ್ಲಿ ಒಂದು ಮಗುವೂ ಸೇರಿತ್ತು. ಜನವರಿಯಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ಎಂಟು ಮಂದಿಯನ್ನು ಗುಂಡಿಕ್ಕಿ ಕೊಂದಿದ್ದರು.
ಕಳೆದ ವರ್ಷ, ಒಂದು ವಾರಾಂತ್ಯದಲ್ಲಿ ದೇಶದ ವಿವಿಧ ಭಾಗಗಳಲ್ಲಿನ ಬಾರ್‌ಗಳಲ್ಲಿ ಮೂರು ಪ್ರತ್ಯೇಕ ಗುಂಡಿನ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದರು. ದಕ್ಷಿಣ ಆಫ್ರಿಕಾವು ಕಟ್ಟುನಿಟ್ಟಾದ ಬಂದೂಕು ಕಾನೂನುಗಳನ್ನು ಹೊಂದಿದೆ. ಆದರೆ, ಅಕ್ರಮ ಬಂದೂಕುಗಳೊಂದಿಗೆ ಗಂಭೀರ ಸಮಸ್ಯೆಗಳನ್ನು ಹೊಂದಿದೆ ಎಂದು ಪೊಲೀಸರು ಮತ್ತು ಸಮುದಾಯ ಕಾರ್ಯಕರ್ತರು ಕಳವಳ ವ್ಯಕ್ತಪಡಿಸಿದ್ದಾರೆ.
30 ಮಂದಿ ಸಾವು, 4 ಸಾವಿರ ಪ್ರಕರಣ: ಅಧಿಕೃತ ಅಪರಾಧ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮೊದಲ ಮೂರು ತಿಂಗಳಲ್ಲಿ ದಕ್ಷಿಣ ಆಫ್ರಿಕಾದಲ್ಲಿ ದಿನಕ್ಕೆ ಸರಾಸರಿ 30 ಜನರು ಬಂದೂಕುಗಳಿಂದ ಹತ್ಯೆಗೀಡಾಗಿದ್ದಾರೆ. ಅದೇ ಮೂರು ತಿಂಗಳ ಅವಧಿಯಲ್ಲಿ, ಗನ್ ಅಥವಾ ಮದ್ದುಗುಂಡುಗಳನ್ನು ಅಕ್ರಮವಾಗಿ ಹೊಂದಿದ್ದ 4 ಸಾವಿರಕ್ಕೂ ಹೆಚ್ಚು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.
ಇದನ್ನೂ ಓದಿ: ಅಮೆರಿಕದ ಫಿಲಡೆಲ್ಫಿಯಾದಲ್ಲಿ ಗುಂಡಿನ ದಾಳಿ; ಕೇರಳ ಮೂಲದ ವಿದ್ಯಾರ್ಥಿ ಹತ್ಯೆ
ಕಾರ್ ರೇಸಿಂಗ್ ಮೇಲೆ ಗುಂಡಿನ ದಾಳಿ: ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಾರ್ ರೇಸ್ನಲ್ಲಿ ಭೀಕರ ಶೂಟೌಟ್ ಘಟನೆ ವರದಿಯಾಗಿತ್ತು. ಆಗಂತುಕರ ಗುಂಡಿನ ದಾಳಿಗೆ 10 ಮಂದಿ ಕಾರ್ ರೇಸರ್ಗಳು ಪ್ರಾಣ ಕಳೆದುಕೊಂಡಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಮೇ 20 ರಂದು ಉತ್ತರ ಮೆಕ್ಸಿಕೋದ ಬಾಜಾ ಕ್ಯಾಲಿಫೋರ್ನಿಯಾದಲ್ಲಿ ಕಾರ್ ರೇಸಿಂಗ್ ನಡೆಯುತ್ತಿತ್ತು. ಈ ವೇಳೆ ವ್ಯಾನ್ವೊಂದರಲ್ಲಿ ಬಂದ ಬಂದೂಕುಧಾರಿಗಳು ಕಾರ್ ರೇಸ್ನಲ್ಲಿ ಭಾಗವಹಿಸಿದವರ ಮೇಲೆ ಏಕಾಏಕಿ ಗುಂಡಿನ ಸುರಿಮಳೆಗೈದಿದ್ದರು.
ಇದನ್ನೂ ಓದಿ: ಮೆಕ್ಸಿಕೋದಲ್ಲಿ ಕಾರ್ ರೇಸಿಂಗ್ ಮೇಲೆ ಗುಂಡಿನ ದಾಳಿ: 10 ರೇಸರ್ಗಳ ಸಾವು, 9 ಮಂದಿಗೆ ಗಾಯ