ಒಟ್ಟಾವಾ (ಕೆನಡಾ): ಕೆನಡಾದ ಉತ್ತರ ಒಂಟಾರಿಯೊ ನಗರದಲ್ಲಿ ಸೋಮವಾರ ಗುಂಡಿನ ದಾಳಿಗೆ ಮೂವರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಹತ್ತಿರದ ಎರಡು ಮನೆಗಳಲ್ಲಿ ಈ ಘಟನೆಗಳು ಸಂಭವಿಸಿವೆ. ಮಂಗಳವಾರ ಸ್ಥಳೀಯ ಕಾಲಮಾನ 10.30ರ ಸುಮಾರಿಗೆ ನಡೆದ ಗುಂಡಿನ ದಾಳಿಯಲ್ಲಿ 6 ವರ್ಷದ, 7 ವರ್ಷದ, 12 ವರ್ಷದ ಮಕ್ಕಳು ಹಾಗೂ 41 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಥಳೀಯ ಕಾಲಮಾನ ರಾತ್ರಿ 10.20ರ ಸುಮಾರಿಗೆ ಪೊಲೀಸರಿಗೆ ಫೋನ್ ಕರೆ ಬಂದಿದ್ದು, ಕರೆ ಬಂದ ಸ್ಥಳಕ್ಕೆ ಹೋಗಿ ನೋಡಿದಾಗ ಟ್ಯಾನ್‌ಕ್ರೆಡ್ ಸ್ಟ್ರೀಟ್‌ನಲ್ಲಿರುವ ಮನೆಯೊಂದರಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದ 41 ವರ್ಷದ ವ್ಯಕ್ತಿಯೊಬ್ಬರು ಪತ್ತೆಯಾಗಿದ್ದರು. ಸುಮಾರು ಹತ್ತು ನಿಮಿಷಗಳ ನಂತರ ಪೊಲೀಸರಿಗೆ ಮತ್ತೊಂದು ಕರೆ ಬಂದಿದ್ದು, ಕರೆಯಲ್ಲಿ ಹತ್ತಿರದ ಇನ್ನೊಂದು ಮನೆಯಲ್ಲಿ ಗುಂಡೇಟಿನಿಂದ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಬಂದಿದೆ. ಅಲ್ಲಿಗೆ ತೆರಳಿದಾಗ ಮೂವರು ಮಕ್ಕಳು ಗುಂಡೇಟಿನಿಂದ ಸಾವನಪ್ಪಿರುವುದು ಪತ್ತೆಯಾಗಿದೆ.
ಅವರ ಜೊತೆಗೆ ಸ್ವತಃ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ ರೀತಿಯಲ್ಲಿ 44 ವರ್ಷದ ವ್ಯಕ್ತಿ, ಆಪಾದಿತ ಶೂಟರ್ ಮೃತದೇಹವೂ ಪತ್ತೆಯಾಗಿದೆ. ಶವಗಳು ಪತ್ತೆಯಾದ ಎರಡು ಮನೆಗಳಲ್ಲಿ ಹಾಗೂ ಸುತ್ತಮುತ್ತ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಎರಡೂ ಸ್ಥಳಗಳಲ್ಲಿನ ಸಾವುಗಳು ಪರಸ್ಪರ ಸಂಬಂಧ ಹೊಂದಿರುವ ಶಂಕೆಯಿದೆ ಎಂದು ಸಾಲ್ಟ್ ಸ್ಟೆ ಮೇರಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಕೋಲಾರ: ಸ್ಥಳೀಯ ಪ್ರಭಾವಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ; ಮೂರೇ ದಿನದಲ್ಲಿ ಇಬ್ಬರು ಕೊಲೆ
ಅಮೆರಿಕದಲ್ಲಿ ಇಂತಹ ಪ್ರಕರಣಗಳು ಕಾಮನ್ ಎನ್ನುವಂತಾಗಿದೆ. ಇಲ್ಲಿ ಆಗಾಗ ಗುಂಡಿನ ದಾಳಿ ಆಗುವ ವರದಿ ಆಗುತ್ತವೆ. ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ಕಳೆದ ಗುರುವಾರ 19 ವರ್ಷದ ವ್ಯಕ್ತಿಯೊಬ್ಬ ನಾಲ್ವರಿಗೆ ಗುಂಡು ಹಾರಿಸಿ, ಮೂವರನ್ನು ಕೊಂದು ಹಾಕಿದ್ದ. ಮೂವರನ್ನು ಶೂಟ್ ಮಾಡಿದ ಬಳಿಕ ತನಗೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದ ಎಂದು ವಾಷಿಂಗ್ಟನ್ ಪೊಲೀಸರು ಮಾಹಿತಿ ನೀಡಿದ್ದರು.
ಟೊಪ್ಪೆನಿಶ್‌ನ ಮನೆಯೊಂದರಲ್ಲಿ ಮುಂಜಾನೆ 5 ಗಂಟೆಗೆ ವ್ಯಕ್ತಿಯೊನ್ನ 13 ವರ್ಷದ ಬಾಲಕ, 18 ವರ್ಷದ ಯುವತಿ ಮತ್ತು 21 ವರ್ಷದ ಮಹಿಳೆಯನ್ನು ಗುಂಡಿಕ್ಕಿ ಕೊಂದಿದ್ದ. ಟೊಪ್ಪೆನಿಶ್ ಪೊಲೀಸ್ ಮುಖ್ಯಸ್ಥ ಜಾನ್ ಕ್ಲಾರಿ ಈ ಬಗ್ಗೆ ಮಾಹಿತಿ ಕೊಟ್ಟಿದ್ದರು. ಗುಂಡಿನ ದಾಳಿ ನಡೆಸಿ ಮೂವರನ್ನು ಕೊಂದು, ಒಬ್ಬನನ್ನು ಗಾಯಗೊಳಿಸಿದ 19 ವರ್ಷದ ಹಂತಕ ಕೊನೆಗೆ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಹೇಳಿದ್ದರು.