ವಾರ್ಸಾ(ಪೋಲೆಂಡ್): ಹವಾಮಾನ ವೈಪರೀತ್ಯಕ್ಕೀಡಾದ ಲಘು ವಿಮಾನ ನೆಲಕ್ಕಪ್ಪಳಿಸಿ ಪೈಲಟ್ ಸೇರಿದಂತೆ ಐವರು ಸಾವನ್ನಪ್ಪಿ, ಇನ್ನೂ ಐವರು ಗಾಯಗೊಂಡ ಘಟನೆ ಪೋಲೆಂಡ್ನಲ್ಲಿ ಸೋಮವಾರ ಸಂಜೆ ನಡೆದಿದೆ. ಕ್ರಿಸ್ಟಿನೊ ನಗರದ ಮೇಲೆ ಹಾರುತ್ತಿದ್ದಾಗ ವಿಮಾನ ಇದ್ದಕ್ಕಿದ್ದಂತೆ ಹುಯ್ದಾಡಿದೆ. ಅದು ನೇರವಾಗಿ ಜರನು ಆಶ್ರಯ ಪಡೆಯಲು ನಿರ್ಮಿಸಲಾಗಿದ್ದ ಶೆಲ್ಟರ್ ಮೇಲೆ ಬಂದು ಬಿದ್ದಿದೆ.
ಲಘು ವಿಮಾನದಲ್ಲಿದ್ದ ಮೂವರು ಪೈಲಟ್ಗಳ ಪೈಕಿ ಓರ್ವ ಸಾವನ್ನಪ್ಪಿದ್ದರೆ, ಇನ್ನಿಬ್ಬರಲ್ಲಿ ಒಬ್ಬರಿಗೆ ಗಾಯವಾಗಿದ್ದು, ಇನ್ನೊಬ್ಬ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ. ಶೆಲ್ಟರ್ನಲ್ಲಿ ಆಶ್ರಯ ಪಡೆಯುತ್ತಿದ್ದ ನಾಲ್ವರು ಘಟನೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಅವರ ಗುರುತುಗಳು ಸಿಕ್ಕಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಕೆಟ್ಟ ಹವಾಮಾನದಿಂದಾಗಿ ವಿಮಾನ ಇಳಿಯುತ್ತಿದ್ದಾಗ, ನಿಯಂತ್ರಣ ಕಳೆದುಕೊಂಡು ಜನರಿದ್ದ ಆಶ್ರಯತಾಣದ ಮೇಲೆ ಬಿದ್ದಿದ್ದು ದುರಂತಕ್ಕೆ ಕಾರಣವಾಗಿದೆ. ಮೂವರಲ್ಲಿ ಓರ್ವ ಪೈಲಟ್ ಸಾವಾಗಿದೆ. ನಾಲ್ವರು ಜನರು ಮೃತಪಟ್ಟಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ"ಎಂದು ಪೋಲೆಂಡ್‌ನ ರಾಜ್ಯ ಅಗ್ನಿಶಾಮಕ ಸೇವೆಯ ಮುಖ್ಯ ಕಮಾಂಡೆಂಟ್ ಆಂಡ್ರೆಜ್ ಬಾರ್ಟ್‌ಕೊವಿಯಾಕ್ ತಿಳಿಸಿದ್ದಾರೆ.
ಫ್ಲೋರಿಡಾದ ದುರಂತ: ಫ್ಲೋರಿಡಾದ ಗಲ್ಫ್ ಕೋಸ್ಟ್ ಬಳಿ ಈಚೆಗೆ ಸಣ್ಣ ವಿಮಾನವೊಂದು ಪತನಗೊಂಡು, ಇಬ್ಬರು ಮಹಿಳೆಯರು ಸೇರಿ ನಾಲ್ವರು ಸಾವನ್ನಪ್ಪಿದ್ದ ದುರಂತ ನಡೆದಿತ್ತು. ವಿಮಾನ ಅಪಘಾತದ ಸ್ಥಳದಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರ ಮೃತದೇಹಗಳನ್ನು ಪತ್ತೆ ಮಾಡಲಾಗಿತ್ತು. ವಿಮಾನವು ವೆನಿಸ್ ವಿಮಾನ ನಿಲ್ದಾಣದಿಂದ ಹೊರಟು ಗಲ್ಫ್ ಆಫ್ ಮೆಕ್ಸಿಕೊದಲ್ಲಿ ಪತನಗೊಂಡಿದೆ ಎಂದು ಪೊಲೀಸರು ತಿಳಿಸಿದ್ದರು. ಅಪಘಾತದ ದೃಶ್ಯವನ್ನು ನೋಡಿದ ಸ್ಥಳೀಯರು ಕರೆ ಮಾಡಿ ಮಾಹಿತಿ ನೀಡಿದ್ದರು.
40 ದಿನ ಬಳಿಕ ಪತ್ತೆಯಾಗಿದ್ದ ಮಕ್ಕಳು: ಕೊಲಂಬಿಯಾದಲ್ಲಿ ವಿಮಾನ ಪತನವಾದ 40 ದಿನಗಳ ಬಳಿಕ ನಾಪತ್ತೆಯಾಗಿದ್ದ ನಾಲ್ವರು ಮಕ್ಕಳು ಸಿಕ್ಕಿದ್ದ ಘಟನೆ ವಿಶ್ವವನ್ನೇ ಅಚ್ಚರಿಗೀಡು ಮಾಡಿತ್ತು. ಅಮೆಜಾನ್ ಕಾಡಿನಲ್ಲಿ ಈ ವಿಮಾನ ದುರಂತ ಘಟಿಸಿತ್ತು. ನ್ಯಾಷನಲ್ ಲಿಬರೇಷನ್ ಆರ್ಮಿಯ ಬಂಡಾಯದ ವೇಳೆ ಸಣ್ಣ ವಿಮಾನದಲ್ಲಿ 4 ಮಕ್ಕಳು ಸೇರಿ 7 ಮಂದಿ ತೆರಳುತ್ತಿದ್ದಾಗ ಅದು ಇದ್ದಕ್ಕಿಂದ್ದಂತೆ ಅಮೆಜಾನ್ ಕಾಡಿನಲ್ಲಿ ಪತನಗೊಂಡಿತ್ತು. ಸ್ಥಳ ಶೋಧ ನಡೆಸಿದಾಗ ವಿಮಾನ ಸುಟ್ಟು ಕರಕಲಾಗಿ ಮೂವರು ಸಾವನ್ನಪ್ಪಿದ್ದರು. ಈ ವೇಳೆ ಮಕ್ಕಳು ಕಂಡು ಬಂದಿರಲಿಲ್ಲ. ಸುತ್ತಲ ಪ್ರದೇಶ ಹುಡುಕಾಡಿದರೂ ಎಲ್ಲೂ ಅವರ ಸುಳಿವು ಸಿಕ್ಕಿರಲಿಲ್ಲ. ಶೋಧ ಕಾರ್ಯಾಚರಣೆ ಮುಂದುವರಿಸಲಾಗಿತ್ತು. 40 ದಿನಗಳ ಬಳಿಕ ಮಕ್ಕಳು ರಕ್ಷಣಾ ಪಡೆಗಳಿಗೆ ಸಿಕ್ಕಿದ್ದರು.
ಇದನ್ನೂ ಓದಿ: ಚಾಮರಾಜನಗರದಲ್ಲಿ ಭಾರತೀಯ ವಾಯುಸೇನೆಯ ಲಘು ವಿಮಾನ ಪತನ: ಪೈಲೆಟ್ಗಳು ಪಾರು