ವಾಷಿಂಗ್ಟನ್ (ಅಮೆರಿಕ): ರಾಮ ಮಂದಿರ ಉದ್ಘಾಟನೆ ವಿಷಯ ಈಗ ದೇಶದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಭಾರೀ ಸದ್ದು ಮಾಡುತ್ತಿದೆ. ಅಮೆರಿಕದ 10 ರಾಜ್ಯಗಳಲ್ಲಿ 40 ಕ್ಕೂ ಹೆಚ್ಚು ಜಾಹೀರಾತು ಫಲಕಗಳು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಮಾಹಿತಿಯನ್ನು ಸಾರುತ್ತಿವೆ. ಇವುಗಳನ್ನು ವಿಶ್ವ ಹಿಂದೂ ಪರಿಷತ್ (ವಿಹೆಚ್ಪಿ) ಮತ್ತು ಭಾರತೀಯರು ಅಳವಡಿಸಿದ್ದಾರೆ.
ಜನವರಿ 22 ರಂದು ನಡೆಯುವ ದಿವ್ಯ ಕಾರ್ಯಕ್ರಮದ ಬಗ್ಗೆ ಜಾಹೀರಾತು ಫಲಕಗಳಲ್ಲಿ ಮಾಹಿತಿ ನೀಡಲಾಗಿದೆ. ಜೊತೆಗೆ ಶ್ರೀರಾಮ ಮತ್ತು ಭವ್ಯ ಮಂದಿರದ ಚಿತ್ರವೂ ಅದರಲ್ಲಿ ಒಡಮೂಡಿದೆ. ಅಮೆರಿಕದಿಂದ ಸಾವಿರಾರು ಮೈಲುಗಳಷ್ಟು ದೂರವಿರುವ ಉತ್ತರಪ್ರದೇಶದಲ್ಲಿ ನಡೆಯುವ ಕಾರ್ಯಕ್ರಮ ವಿಶ್ವದ ಅಗ್ರ ದೇಶದಲ್ಲಿ ಪ್ರಚಾರ ಪಡೆಯುತ್ತಿರುವುದು ವಿಶೇಷವಾಗಿದೆ.
ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಅಮೆರಿಕದಲ್ಲಿ ನೆಲೆಸಿರುವ ಹಿಂದೂಗಳು ಈ ನಾಮಫಲಕಗಳನ್ನು ಅಳವಡಿಸಿದ್ದಾರೆ. ಟೆಕ್ಸಾಸ್, ಇಲಿನಾಯ್ಸ್, ನ್ಯೂಯಾರ್ಕ್, ನ್ಯೂಜೆರ್ಸಿ, ಜಾರ್ಜಿಯಾ, ಅರಿಜೋನಾ ಮತ್ತು ಮಿಸೌರಿಯಲ್ಲಿ ರಾಮನ ಫಲಕಗಳು ರಾರಾಜಿಸುತ್ತಿವೆ. ಇನ್ನಷ್ಟು ರಾಜ್ಯಗಳಲ್ಲಿ ಮಾಹಿತಿ ಫಲಕ ಹಾಕಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಧಾರ್ಮಿಕ ಕಾರ್ಯಕ್ರಮಗಳು: "ಜೀವಮಾನದಲ್ಲಿ ಒಮ್ಮೆ ಮಾತ್ರ ಘಟಿಸುವ ಇಂತಹ ಪವಿತ್ರ ಕಾರ್ಯಕ್ರಮದಲ್ಲಿ ಅಮೆರಿಕನ್ ಹಿಂದೂಗಳು ಉಲ್ಲಾಸ ಮತ್ತು ಸಂತೋಷದಿಂದ ಪಾಲ್ಗೊಳ್ಳುತ್ತಿದ್ದಾರೆ ಎಂಬುದು ಈ ಜಾಹೀರಾತು ಫಲಕಗಳೇ ಹೇಳುತ್ತವೆ. ಪವಿತ್ರ ಸಮಾರಂಭದ ಮಂಗಳಕರ ದಿನಕ್ಕಾಗಿ ಕಾತರದಿಂದ ಕಾಯುತ್ತಿದ್ದೇವೆ" ಎಂದು ಅಮೆರಿಕದಲ್ಲಿನ ಹಿಂದೂ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಮಿತ್ತಲ್ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯ ಸ್ಮರಣಾರ್ಥ, ಅಮೆರಿಕದಲ್ಲಿ ಹಿಂದೂ ಅಮೆರಿಕನ್ ಸಮುದಾಯವು ಕಾರು ರ್ಯಾಲಿಗಳನ್ನು ಆಯೋಜಿಸಿದೆ. ಪ್ರಾಣ ಪ್ರತಿಷ್ಠಾಪನೆ ಪೂರ್ವಭಾವಿಯಾಗಿ ಇನ್ನೂ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನೂ ಯೋಜಿಸಿದೆ ಎಂದು ತಿಳಿದುಬಂದಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನವರಿ 22 ರ ಅಂದು ಮಧ್ಯಾಹ್ನ 12 ಗಂಟೆಗೆ ಭವ್ಯ ಮಂದಿರದ ಗರ್ಭಗುಡಿಯಲ್ಲಿ ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಿದ್ದಾರೆ. ಜನವರಿ 16 ರಿಂದಲೇ ದಿವ್ಯ ಕಾರ್ಯಕ್ರಮದ ವಿಧಿವಿಧಾನಗಳು ಆರಂಭವಾಗಲಿವೆ.
ರಾಮಾಯಣ ವಿಶ್ವದ ಭೌಗೋಳಿಕ ಸೇತುವೆ: ರಾಮಾಯಣವು ವಿಶ್ವದ ಭೌಗೋಳಿಕ ಸೇತುವೆಯಾಗಿದೆ ಮತ್ತು ಮಾನವ ಸಂಬಂಧಗಳ ಸಂಕೀರ್ಣತೆ, ಒಳ್ಳೆಯದು ಮತ್ತು ಕೆಟ್ಟದ್ದರ ನಡುವಿನ ಶಾಶ್ವತ ಹೋರಾಟದ ಬಗ್ಗೆ ಜನರಿಗೆ ತಿಳಿಸುತ್ತದೆ ಎಂದು ಯುಎಸ್ನಲ್ಲಿ ಭಾರತೀಯ ರಾಯಭಾರಿ ತರನ್ಜೀತ್ ಸಿಂಗ್ ಸಂಧು ಹೇಳಿದ್ದಾರೆ. ವಾಷಿಂಗ್ಟನ್ ಡಿಸಿಯ ಯುಎಸ್ ಕ್ಯಾಪಿಟಲ್ ಹಿಲ್ನಲ್ಲಿ ನಡೆದ 'ಏಷ್ಯಾ ಮತ್ತು ಅದರಾಚೆಗಿನ ರಾಮಾಯಣ' (Ramayana across Asia and Beyond) ಎಂಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಯಲ್ಲಿ ಭವ್ಯ ಮಂದಿರ ನಿರ್ಮಿಸಲು ಶ್ರೀರಾಮನಿಂದ ಭಕ್ತ ಮೋದಿ ಆಯ್ಕೆ: ಅಡ್ವಾಣಿ