ಕಾಬೂಲ್ (ಅಫ್ಘಾನಿಸ್ತಾನ್) : ಕಳೆದ ಒಂದು ತಿಂಗಳ ಅವಧಿಯಲ್ಲಿ ನೆರೆಯ ಇರಾನ್‌ನಿಂದ ಒಟ್ಟು 35,999 ನಿರಾಶ್ರಿತರು ಅಫ್ಘಾನಿಸ್ತಾನಕ್ಕೆ ಮರಳಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ. ವರ್ಷಗಳ ಕಾಲ ಇರಾನ್‌ನಲ್ಲಿ ನೆಲೆಸಿದ್ದ ಆಫ್ಘನ್ ನಿರಾಶ್ರಿತರು ಕಳೆದ ತಿಂಗಳಿನಲ್ಲಿ ಅಫ್ಘಾನಿಸ್ತಾನದಲ್ಲಿರುವ ತಮ್ಮ ತಾಯ್ನಾಡಿಗೆ ಮರಳಿದ್ದಾರೆ ಮತ್ತು ನಿರಾಶ್ರಿತರನ್ನು ತಮ್ಮ ದೇಶಕ್ಕೆ ಹಿಂದಿರುಗಿಸುವ ಪ್ರಕ್ರಿಯೆ ಮುಂದುವರೆದಿದೆ ಎಂದು ಸುದ್ದಿ ಸಂಸ್ಥೆಯೊಂದು ಸ್ಥಳೀಯ ಮಾಧ್ಯಮವನ್ನು ಉಲ್ಲೇಖಿಸಿ ವರದಿ ಮಾಡಿದೆ.
ಒಂದೆರಡು ತಿಂಗಳ ಹಿಂದೆ ಇರಾನ್‌ನಿಂದ ಅಫ್ಘಾನಿಸ್ತಾನಕ್ಕೆ 3,00,000 ಕ್ಕೂ ಹೆಚ್ಚು ಅಫ್ಘಾನ್ ನಿರಾಶ್ರಿತರನ್ನು ಮರಳಿ ಕಳುಹಿಸಿರುವುದಾಗಿ ವರದಿಯಾಗಿದೆ. 2.5 ಮಿಲಿಯನ್‌ಗಿಂತಲೂ ಹೆಚ್ಚು ನೋಂದಾಯಿತ ಆಫ್ಘನ್ ನಿರಾಶ್ರಿತರು ಇರಾನ್‌ನಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಷ್ಟೇ ಸಂಖ್ಯೆಯ ಜನರು ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ. ವಿದೇಶದಲ್ಲಿ ನೆಲೆಸಿರುವ ಆಫ್ಘನ್ ನಿರಾಶ್ರಿತರು ಸ್ವದೇಶಕ್ಕೆ ಮರಳುವಂತೆ ಮತ್ತು ತಮ್ಮ ತಾಯ್ನಾಡಿನ ಪುನರ್ನಿರ್ಮಾಣಕ್ಕೆ ಕೊಡುಗೆ ನೀಡುವಂತೆ ತಾಲಿಬಾನ್ ಸರ್ಕಾರವು ಕರೆ ನೀಡುತ್ತಿದೆ. ವಿಶ್ವದಲ್ಲಿ ಅತ್ಯಂತ ಹೆಚ್ಚು ಸಂಖ್ಯೆಯ ನಿರಾಶ್ರಿತರು ಆಫ್ಘನ್ನರೇ ಆಗಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಜಗತ್ತಿನಲ್ಲಿ 2.6 ಮಿಲಿಯನ್ ನೋಂದಾಯಿತ ಆಫ್ಘನ್ ನಿರಾಶ್ರಿತರಿದ್ದಾರೆ. ಅವರಲ್ಲಿ 2.2 ಮಿಲಿಯನ್ ನಿರಾಶ್ರಿತರು ಇರಾನ್ ಮತ್ತು ಪಾಕಿಸ್ತಾನದಲ್ಲಿದ್ದಾರೆ. ಇನ್ನೂ 3.5 ಮಿಲಿಯನ್ ಜನರು ಆಂತರಿಕವಾಗಿ ಸ್ಥಳಾಂತರಗೊಂಡಿದ್ದಾರೆ. ಇವರು ದೇಶದೊಳಗೆ ಆಶ್ರಯಕ್ಕಾಗಿ ತಮ್ಮ ಮನೆಗಳನ್ನು ತೊರೆದಿದ್ದಾರೆ.
ಅಮೆರಿಕದೊಂದಿಗೆ ಸಹಕಾರಕ್ಕೆ ಒಪ್ಪಿದ ತಾಲಿಬಾನ್: ಉಗ್ರಗಾಮಿ ಗುಂಪು ಇಸ್ಲಾಮಿಕ್ ಸ್ಟೇಟ್ (ಐಎಸ್) ವಿರುದ್ಧದ ಹೋರಾಟದಲ್ಲಿ ಅಮೆರಿಕಕ್ಕೆ ಸಹಾಯ ಮಾಡಲು ತಾನು ಸಿದ್ಧವಾಗಿರುವುದಾಗಿ ಅಫ್ಘಾನ್ ತಾಲಿಬಾನ್ ಹೇಳಿದೆ. ಇಸ್ಲಾಮಿಕ್ ಸ್ಟೇಟ್ ಜಿಹಾದಿಗಳು ತಾಲಿಬಾನ್ ಅಸ್ತಿತ್ವಕ್ಕೆ ಅಪಾಯ ತರಬಲ್ಲರು ಎಂಬ ಸಂಶಯದಿಂದ ತಾಲಿಬಾನ್ ಇಂಥದೊಂದು ಸಹಕಾರಕ್ಕೆ ಸಿದ್ಧವಾಗಿದೆ ಎನ್ನಲಾಗಿದೆ.
ಅಮೆರಿಕ ಮತ್ತು ಅದರ ಮಿತ್ರಪಡೆಗಳೊಂದಿಗೆ ಸತತ 20 ವರ್ಷಗಳ ಕಾಲ ಹೋರಾಡಿದ ನಂತರ ತಾಲಿಬಾನ್ ಆಗಸ್ಟ್ 2021 ರಲ್ಲಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿತ್ತು. ಆದರೆ ಅದರ ನಂತರ ಅದು ಇಸ್ಲಾಮಿಕ್ ಸ್ಟೇಟ್ ಉಗ್ರವಾದಿಗಳೊಂದಿಗೆ ಹೋರಾಟ ನಡೆಸುತ್ತಿದೆ. ತಾಲಿಬಾನ್ ಹಾಗೂ ಇಸ್ಲಾಮಿಕ್ ಸ್ಟೇಟ್ ಎರಡೂ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳಾಗಿದ್ದು, ಅಫ್ಘಾನಿಸ್ತಾನದಲ್ಲಿ ಪರಸ್ಪರ ಕಾದಾಟ ನಡೆಸುತ್ತಿವೆ.
ಮಾನವೀಯ ನೆರವಿಗೆ ಹಣಕಾಸು ಅಗತ್ಯ: ಅಫ್ಘಾನಿಸ್ತಾನದಲ್ಲಿ ಮಾನವೀಯ ಸಹಾಯಕ್ಕಾಗಿ 2023ರಲ್ಲಿ ವಿಶ್ವಸಂಸ್ಥೆಗೆ 4.62 ಬಿಲಿಯನ್ ಡಾಲರ್ ಹಣಕಾಸಿನ ಅಗತ್ಯವಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. OCHA ಪ್ರಕಾರ, ಅಫ್ಘಾನಿಸ್ತಾನದ ನಾಗರಿಕರಿಗೆ ಮಾನವೀಯ ನೆರವು ಕೊನೆಯ ಜೀವನಾಡಿಯಾಗಿ ಉಳಿದಿದೆ. ಅಫ್ಘಾನಿಸ್ತಾನವು ತನ್ನ ಸತತ 3 ನೇ ವರ್ಷದ ಬರಗಾಲ, 2 ನೇ ವರ್ಷದ ತೀವ್ರ ಆರ್ಥಿಕ ಸಂಕಷ್ಟ ಮತ್ತು ದಶಕಗಳ ಯುದ್ಧ ಮತ್ತು ಮರುಕಳಿಸುವ ನೈಸರ್ಗಿಕ ವಿಕೋಪಗಳ ಪರಿಣಾಮಗಳನ್ನು ಎದುರಿಸುತ್ತಿರುವಾಗ, ಮಾನವೀಯ ನೆರವು ಹೆಚ್ಚಿನ ಜನಸಂಖ್ಯೆಗೆ ಕೊನೆಯ ಜೀವನಾಡಿಯಾಗಿ ಉಳಿದಿದೆ. 2023 ರಲ್ಲಿ 23.7 ಮಿಲಿಯನ್ ಜನರಿಗೆ ಸಹಾಯ ಮಾಡಲು 4.62 ಬಿಲಿಯನ್ ಡಾಲರ್ ಅಗತ್ಯವಿದೆ ಎಂದು OCHA ಹೇಳಿದೆ.
ಇದನ್ನೂ ಓದಿ : ಗಡಿ ದಾಟಿ ಯುದ್ಧ ಮಾಡ್ತೀವಿ: ಭಾರತದ ವಿರುದ್ಧ ಹಲುಬಿದ ಪಾಕ್ ಸೇನೆ