ನ್ಯೂಯಾರ್ಕ್ (ಅಮೆರಿಕ) : 2001ರ ಸೆಪ್ಟೆಂಬರ್ 9 ರಂದು ಅಮೆರಿಕದ ಮೇಲೆ ಭೀಕರ ಭಯೋತ್ಪಾದಕ ದಾಳಿಗಳು ನಡೆದು 22 ವರ್ಷಗಳೇ ಕಳೆದು ಹೋಗಿದ್ದರೂ, ಅವುಗಳಿಂದ ಆದ ಗಾಯ ಮಾತ್ರ ಇನ್ನೂ ಮಾಸಿಲ್ಲ. 2001 ರಲ್ಲಿ ನ್ಯೂಯಾರ್ಕ್ ನಗರ ಮತ್ತು ವಾಷಿಂಗ್ಟನ್ ಡಿಸಿ ನಗರಗಳ ಮೇಲೆ ವಿಮಾನಗಳನ್ನು ಅಪಹರಿಸಿ ಸರಣಿ ಆತ್ಮಹತ್ಯಾ ದಾಳಿಗಳನ್ನು ನಡೆಸಲಾಗಿತ್ತು. ಮುಸ್ಲಿಂ ಮೂಲಭೂತವಾದಿಗಳ ಈ ದಾಳಿಗಳಲ್ಲಿ 3,000 ಜನ ಪ್ರಾಣ ಕಳೆದುಕೊಂಡಿದ್ದರು.
ಮುಸ್ಲಿಂ ಬ್ರದರ್ಹುಡ್ ಎಂಬ ಭಯೋತ್ಪಾದಕ ಸಂಘಟನೆಯ ಸಕ್ರಿಯ ಸದಸ್ಯರಾಗಿದ್ದ ಖಾಲಿದ್ ಶೇಖ್ ಮೊಹಮ್ಮದ್ 9/11 ದಾಳಿಯ ಪ್ರಮುಖ ರೂವಾರಿಯಾಗಿದ್ದ ಎಂದು ನಂಬಲಾಗಿದೆ. 1990 ರ ದಶಕದಲ್ಲಿ ಒಂದು ಡಜನ್ಗೂ ಹೆಚ್ಚು ಅಮೆರಿಕನ್ ವಿಮಾನಗಳನ್ನು ಸ್ಫೋಟಿಸುವುದು ಖಾಲಿದ್ನ ಯೋಜನೆಯಾಗಿತ್ತು. ಆದರೆ ಅದು ವಿಫಲವಾಗಿತ್ತು ಮತ್ತು ಆತ ತದನಂತರ 9/11 ಭಯೋತ್ಪಾದಕ ದಾಳಿಯನ್ನು ಸಂಘಟಿಸಿದ ಒಸಾಮಾ ಬಿನ್ ಲಾಡೆನ್ ಜೊತೆಗೆ ಕೈಜೋಡಿಸಿದ್ದ.
2 ದಶಕದ ಬಳಿಕ ಮತ್ತಿಬ್ಬರ ಗುರುತು ಪತ್ತೆ: ಈ ಭೀಕರ ಭಯೋತ್ಪಾದಕ ದಾಳಿ ನಡೆದು ಎರಡು ದಶಕಗಳ ನಂತರ, ವಿಶ್ವ ವ್ಯಾಪಾರ ಕೇಂದ್ರದ ಮೇಲಿನ 9/11 ದಾಳಿಯಲ್ಲಿ ಸಾವನ್ನಪ್ಪಿದ ಇಬ್ಬರು ವ್ಯಕ್ತಿಗಳನ್ನು ಇದೀಗ ಗುರುತಿಸಲಾಗಿದೆ. ದಾಳಿಗಳಲ್ಲಿ ಮೃತಪಟ್ಟವರನ್ನು ಗುರುತಿಸಿ ಅವರ ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಲೇ ಇವೆ. ಇದೀಗ ದಾಳಿ ನಡೆದು 22ನೇ ವರ್ಷ ತುಂಬುವ ಮೊದಲು ಓರ್ವ ಪುರುಷ ಮತ್ತು ಓರ್ವ ಮಹಿಳೆಯ ಅವಶೇಷಗಳನ್ನು ಗುರುತಿಸಲಾಗಿದೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ಅವರ ಕುಟುಂಬಗಳ ಕೋರಿಕೆಯ ಮೇರೆಗೆ ಅಧಿಕಾರಿಗಳು ಅವರ ಹೆಸರುಗಳನ್ನು ಬಹಿರಂಗ ಪಡಿಸಿಲ್ಲ.
ಮತ್ತೆ ಇಬ್ಬರ ಗುರುತನ್ನು ಪತ್ತೆ ಮಾಡುವ ಮೂಲಕ ಈವರೆಗೆ ದಾಳಿಯಲ್ಲಿ ಮೃತಪಟ್ಟ ಒಟ್ಟು 1649 ಜನರನ್ನು ಗುರುತಿಸಲು ಸಾಧ್ಯವಾದಂತಾಗಿದೆ. ಮೃತರ ಅವಶೇಷಗಳಲ್ಲಿ ಪತ್ತೆಯಾದ ದೇಹದ ತುಣುಕುಗಳನ್ನು ಡಿಎನ್ಎ ಅನುಕ್ರಮ ತಂತ್ರಗಳನ್ನು ಬಳಸಿ ಪರೀಕ್ಷಿಸಲಾಗುತ್ತಿದೆ. ಇತ್ತೀಚಿನ ಹೊಸ ತಂತ್ರಜ್ಞಾನದಿಂದ ಹೆಚ್ಚಿದ ಪರೀಕ್ಷೆಗಳ ನಿಖರತೆಯಿಂದ ಮೃತರನ್ನು ಗುರುತಿಸಲು ಅನುಕೂಲವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿಂದೆ 2019 ರಲ್ಲಿ 9/11 ದಾಳಿಯಲ್ಲಿ ಮೃತಪಟ್ಟವರ ಅವಶೇಷಗಳನ್ನು ಕೊನೆಯ ಬಾರಿಗೆ ಪತ್ತೆ ಮಾಡಲಾಗಿತ್ತು. ಈಗಲೂ ದಾಳಿಯಲ್ಲಿ ಮೃತಪಟ್ಟ 1000ಕ್ಕೂ ಹೆಚ್ಚು ಜನರ ಅವಶೇಷಗಳನ್ನು ಗುರುತಿಸಲು ಸಾಧ್ಯವಾಗಿಲ್ಲ.
2001ಕ್ಕೂ ಮುನ್ನವೂ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಭಯೋತ್ಪಾದಕ ದಾಳಿ ನಡೆದಿತ್ತು. 1993 ರಲ್ಲಿ ಕಟ್ಟಡದ ನಾರ್ತ್ ಟವರ್ನ ಪಾರ್ಕಿಂಗ್ ಗ್ಯಾರೇಜ್ನಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ಈ ಘಟನೆಯಲ್ಲಿ 6 ಜನ ಸಾವಿಗೀಡಾಗಿ, ಸಾವಿರಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು. 9/11 ದಾಳಿ ನಡೆಸಿದ ದಾಳಿಕೋರರು ಪ್ರವಾಸಿ, ವ್ಯಾಪಾರ ಅಥವಾ ವಿದ್ಯಾರ್ಥಿ ವೀಸಾಗಳ ಮೂಲಕ ಕಾನೂನುಬದ್ಧವಾಗಿಯೇ ಅಮೆರಿಕವನ್ನು ಪ್ರವೇಶಿಸಿದ್ದರು. ಕೆಲ ದಾಳಿಕೋರರು ಫ್ಲೋರಿಡಾದ ವಿಮಾನ ಹಾರಾಟ ತರಬೇತಿ ಕೇಂದ್ರಗಳಲ್ಲಿಯೇ ತರಬೇತಿ ಪಡೆದಿದ್ದರು.
ಇದನ್ನೂ ಓದಿ : ಕೊರೊನಾ ಸಂಬಂಧಿತ ಸರ್ಚ್ ಬ್ಲಾಕ್ ಮಾಡಿದ ಥ್ರೆಡ್ಸ್; ಆರೋಗ್ಯ ತಜ್ಞರಿಂದ ಖಂಡನೆ