ನವದೆಹಲಿ: 1985 ರ ಏರ್ ಇಂಡಿಯಾ ಕಾನಿಷ್ಕ ವಿಮಾನದ ಮೇಲಿನ ಭಯಾನಕ ಬಾಂಬ್ ದಾಳಿ ಪ್ರಕರಣದಲ್ಲಿ ದೋಷಮುಕ್ತಗೊಂಡ ವ್ಯಕ್ತಿಯನ್ನು ಕೊಂದಿರುವ ಇಬ್ಬರನ್ನು ಕೆನಡಾ ಪೊಲೀಸರು ಬಂಧಿಸಿದ್ದಾರೆ. ಟನ್ನರ್ ಫಾಕ್ಸ್ (21) ಹಾಗು ಜೋಸ್ ಲೊಪೆಜ್ (23) ಬಂಧಿತರೆಂದು ತಿಳಿದುಬಂದಿದೆ.
75 ವರ್ಷದ ರಿಪು ದಮನ್ ಸಿಂಗ್ ಎಂಬಾತನನ್ನು ಬ್ರಿಟಿಷ್ ಕೊಲಂಬಿಯಾದ ಸರ್ರೆ ಎಂಬಲ್ಲಿ ಆರೋಪಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಮಲಿಕ್ ಮತ್ತು ಈತನ ಸಹಚರ ಅಜಿಬ್ ಸಿಂಹ್ ಬಜ್ರಿ ಎಂಬಿಬ್ಬರನ್ನು 1985 ರಲ್ಲಿ ನಡೆದ ಏರ್ ಇಂಡಿಯಾ ವಿಮಾನದ ಮೇಲಿನ ಬಾಂಬ್ ದಾಳಿಯ ರೂವಾರಿಗಳು ಎನ್ನಲಾಗಿತ್ತು. ಇವರ ವಿರುದ್ಧ 331 ಪ್ರಯಾಣಿಕರ ಸಾವಿನ ಸಂಬಂಧ ಸಾಮೂಹಿಕ ಹತ್ಯೆ ಮತ್ತು ಪಿತೂರಿ ಪ್ರಕರಣವಿತ್ತು. ಆದರೆ ಈ ಇಬ್ಬರೂ 2005 ರಲ್ಲಿ ದೋಷಮುಕ್ತರಾಗಿ ಹೊರಬಂದಿದ್ದರು.
ಈ ಕುರಿತು ದಕ್ಷಿಣ ಸರ್ರೆಯ ತಮ್ಮ ಐಷಾರಾಮಿ ಮನೆಯ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮಲಿಕ್ ಹಿರಿಯ ಮಗ ಜಸ್‌ಪ್ರೀತ್, "ತಂದೆಗೆ ಯಾವುದೇ ರೀತಿಯ ಭದ್ರತಾ ಸಮಸ್ಯೆಗಳಿರಲಿಲ್ಲ. ಅವರು ತಮ್ಮ ವಾಣಿಜ್ಯ ವ್ಯವಹಾರಗಳಲ್ಲಿ ನಿರತರಾಗಿದ್ದರು. ಜತೆಗೆ, ಸಮುದಾಯದ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು" ಎಂದು ತಿಳಿಸಿದರು.