ಕರಾಚಿ (ಪಾಕಿಸ್ತಾನ) : ಮೀನುಗಾರಿಕೆ ನಡೆಸುವಾಗ ಗೊತ್ತಿಲ್ಲದೆ ಪಾಕಿಸ್ತಾನಕ್ಕೆ ಸೇರಿದ ಸಮುದ್ರಕ್ಕೆ ಅಕ್ರಮವಾಗಿ ಪ್ರವೇಶಿಸಿ ಬಂಧಿತರಾಗಿರುವ 199 ಭಾರತೀಯ ಮೀನುಗಾರರನ್ನು ಪಾಕಿಸ್ತಾನದ ಅಧಿಕಾರಿಗಳು ಶುಕ್ರವಾರ ಮೇ 12 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಇವರೊಂದಿಗೆ ಬಿಡುಗಡೆಯಾಗಬೇಕಿದ್ದ ಭಾರತೀಯನೋರ್ವನ ಸಾವಿನ ಹೊರತಾಗಿಯೂ ಪಾಕಿಸ್ತಾನವು ಸದ್ಭಾವನೆಯ ಕಾರ್ಯಕ್ರಮ ಮುಂದುವರಿಸಲಿದೆ.
ಶುಕ್ರವಾರ 199 ಭಾರತೀಯ ಮೀನುಗಾರರ ಬಿಡುಗಡೆ ಮತ್ತು ವಾಪಸಾತಿಗೆ ತಯಾರಿ ನಡೆಸುವಂತೆ ಸಂಬಂಧಿತ ಸರ್ಕಾರಿ ಸಚಿವಾಲಯಗಳು ತಿಳಿಸಿವೆ ಎಂದು ಸಿಂಧ್‌ನ ಜೈಲು ಇಲಾಖೆಯ ಉನ್ನತ ಪೊಲೀಸ್ ಅಧಿಕಾರಿ ಕಾಜಿ ನಜೀರ್ ಹೇಳಿದ್ದಾರೆ. ಈ ಮೀನುಗಾರರನ್ನು ಲಾಹೋರ್‌ಗೆ ಕಳುಹಿಸಲಾಗುವುದು ಮತ್ತು ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು. ಸದ್ಯ ಮೀನುಗಾರರನ್ನು ಇಲ್ಲಿನ ಲಾಂಧಿ ಜೈಲಿನಲ್ಲಿ ಇರಿಸಲಾಗಿದೆ.
ಲಾಂಧಿ ಜೈಲಿನ ಅಧಿಕಾರಿಗಳ ಪ್ರಕಾರ, ಭಾರತೀಯ ಖೈದಿಯೊಬ್ಬ ತೀವ್ರ ಜ್ವರ ಮತ್ತು ಹೃದಯ ಸಮಸ್ಯೆಯಿಂದ ಬಳಲುತ್ತಿದ್ದ. ಕಳೆದ ವಾರ ಆತನ ಸ್ಥಿತಿ ಹದಗೆಟ್ಟಿತ್ತು. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಆತ ಶ್ವಾಸಕೋಶದ ಸೋಂಕಿನಿಂದ ನಿಧನರಾದರು ಎಂದು ಅವರು ಹೇಳಿದರು.
ಲಾಂಧಿ ಮತ್ತು ಮಾಲಿರ್ ಜೈಲುಗಳಲ್ಲಿನ ಪರಿಸ್ಥಿತಿಯು ಏನೇನೂ ಸರಿಯಾಗಿಲ್ಲ. ಅನಾರೋಗ್ಯಕ್ಕೀಡಾದ ಹಾಗೂ ದೀರ್ಘಾವಧಿಯ ಕಾಯಿಲೆ ಹೊಂದಿರುವವರಿಗೆ ಇಲ್ಲಿ ಯಾವುದೇ ಚಿಕಿತ್ಸೆ ಸಿಗುವುದಿಲ್ಲ. ಹೀಗಾಗಿ ಭಾರತೀಯ ಪ್ರಜೆ ಜುಲ್ಫಿಕರ್ ಈತನ ಸಾವು ಆಶ್ಚರ್ಯಕರವೇನಲ್ಲ ಎಂದು ಎಧಿ ವೆಲ್ಫೇರ್ ಟ್ರಸ್ಟ್ ಹೇಳಿದೆ. ಎಧಿ ವೆಲ್ಪೇರ್ ಟ್ರಸ್ಟ್ ಇದು ಭಾರತೀಯ ಮೀನುಗಾರರನ್ನು ಲಾಹೋರ್‌ಗೆ ತಲುಪಿಸುವ ಮತ್ತು ಜೈಲುಗಳಲ್ಲಿ ಅವರ ಯೋಗಕ್ಷೇಮದ ಕಾರ್ಯವನ್ನು ನೋಡಿಕೊಳ್ಳುತ್ತದೆ.
ಜೈಲಿನ ವೈದ್ಯರು ಅಥವಾ ಅಲ್ಲಿನ ಆಸ್ಪತ್ರೆಗಳು ಗಂಭೀರ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವ್ಯವಸ್ಥೆಗಳನ್ನು ಹೊಂದಿಲ್ಲ ಮತ್ತು ರೋಗಿಯನ್ನು ಬೇರೆ ಆಸ್ಪತ್ರೆಗೆ ಕಳುಹಿಸಲು ಶಿಫಾರಸು ಮಾಡಲಾಗುತ್ತದೆ. ಆದರೆ ಕೆಲವೊಮ್ಮೆ ಅದು ತುಂಬಾ ತಡವಾಗಿರುತ್ತದೆ ಎಂದು ಅಧಿಕಾರಿ ಹೇಳಿದರು. ಪ್ರಸ್ತುತ 631 ಭಾರತೀಯ ಮೀನುಗಾರರು ಮತ್ತು ಒಬ್ಬ ನಾಗರಿಕ ಕೈದಿಗಳು ತಮ್ಮ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದರೂ ಕರಾಚಿಯ ಲಾಂಧಿ ಮತ್ತು ಮಲಿರ್ ಜೈಲುಗಳಲ್ಲಿದ್ದಾರೆ ಎಂದು ಪಾಕಿಸ್ತಾನ್ ಇಂಡಿಯಾ ಪೀಪಲ್ಸ್ ಫೋರಮ್ ಫಾರ್ ಪೀಸ್ ಅಂಡ್ ಡೆಮಾಕ್ರಸಿ ಹೇಳಿದೆ.
ಕರಾಚಿಯಲ್ಲಿ ಫೋರಂನೊಂದಿಗೆ ಕೆಲಸ ಮಾಡುವ ಆದಿಲ್ ಶೇಖ್ ಹೇಳುವ ಪ್ರಕಾರ, ಈ ಭಾರತೀಯ ಮೀನುಗಾರರೆಲ್ಲರೂ ಪಾಕಿಸ್ತಾನ ಮತ್ತು ಭಾರತದ ನಡುವಿನ ಸಮುದ್ರ ಪ್ರಾದೇಶಿಕ ಗಡಿರೇಖೆಯ ಒಪ್ಪಂದವನ್ನು ಉಲ್ಲಂಘಿಸಿದ ಆರೋಪದಲ್ಲಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದಾರೆ. ಬಹುತೇಕ ಎಲ್ಲರೂ ಬಡ ಅನಕ್ಷರಸ್ಥರು ಎಂದು ಅವರು ಹೇಳಿದರು. ಜೈಲು ಅಧಿಕಾರಿಗಳ ಪ್ರಕಾರ, ಈ ಹಿಂದೆಯೂ ಕೆಲ ಭಾರತೀಯ ನಾಗರಿಕ ಕೈದಿಗಳು ಅನಾರೋಗ್ಯದ ಕಾರಣ ಆಸ್ಪತ್ರೆಗಳಲ್ಲಿ ಸಾವನ್ನಪ್ಪಿದ್ದಾರೆ. ಒಟ್ಟು 654 ಭಾರತೀಯ ಮೀನುಗಾರರು ಕರಾಚಿ ಜೈಲುಗಳಲ್ಲಿ ಕೊಳೆಯುತ್ತಿದ್ದರೆ, ಅಂದಾಜು 83 ಪಾಕಿಸ್ತಾನಿ ಮೀನುಗಾರರು ಭಾರತೀಯ ಜೈಲುಗಳಲ್ಲಿದ್ದಾರೆ. 654 ಭಾರತೀಯ ಮೀನುಗಾರರ ಪೈಕಿ 631 ಮಂದಿ ತಮ್ಮ ಶಿಕ್ಷೆಯನ್ನು ಪೂರ್ಣಗೊಳಿಸಿದ್ದಾರೆ ಮತ್ತು ವಾಪಸಾತಿಗಾಗಿ ಕಾಯುತ್ತಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದ ಆರ್ಥಿಕ ಸ್ಥಿತಿ ಶ್ರೀಲಂಕಾಗಿಂತಲೂ ಕಳಪೆ: ಮಾಜಿ ಪ್ರಧಾನಿ ಇಮ್ರಾನ್ ಖಾನ್