ಜಕಾರ್ತ (ಇಂಡೋನೇಷ್ಯಾ): ಸೋಮವಾರ ಇಂಡೋನೇಷ್ಯಾದ ಸುಲವೆಸಿ ದ್ವೀಪದಲ್ಲಿ ಪ್ರಯಾಣಿಕರನ್ನು ತುಂಬಿದ್ದ ದೋಣಿ ಮುಳುಗಿ ಕನಿಷ್ಠ 15 ಜನರು ಸಾವನ್ನಪ್ಪಿದ್ದು, 19 ಜನ ನಾಪತ್ತೆಯಾಗಿರುವ ಘಟನೆ ನಡೆದಿದೆ. ಆಗ್ನೇಯ ಸುಲವೆಸಿ ಪ್ರಾಂತ್ಯದ ಬುಟನ್ ಸೆಂಟ್ರಲ್ ರೀಜೆನ್ಸಿಯ ಲ್ಯಾಂಟೊ ಗ್ರಾಮದಿಂದ ಸಮೀಪದ ಲಾಗಿ ಗ್ರಾಮಕ್ಕೆ ಪ್ರಯಾಣಿಸುತ್ತಿದ್ದ ದೋಣಿ ಸೋಮವಾರ ಮಗುಚಿ ಬಿದ್ದಿದೆ ಎಂದು ಬುಟನ್‌ನ ಶೋಧ ಮತ್ತು ರಕ್ಷಣಾ ಸಂಸ್ಥೆಯ ಮುಖ್ಯಸ್ಥ ಮುಹಮ್ಮದ್ ಅರಾಫಾ ಹೇಳಿದ್ದಾರೆ.
"20 ಜನರ ಸಾಮರ್ಥ್ಯದ ದೋಣಿಯಲ್ಲಿ 40 ಜನರು ಪ್ರಯಾಣಿಸುತ್ತಿದ್ದರು. ಈ ವೇಳೆ ಅತಿಯಾದ ಬಾರದಿಂದ ದೋಣಿ ಮಗುಚಿ ಬಿದ್ದಿದೆ. 15 ಜನ ಪ್ರಯಾಣಿಕರು ಸಾವನ್ನಪ್ಪಿದ್ದು, ಇನ್ನೂ 19 ಜನ ಸಮುದ್ರದಲ್ಲಿ ನಾಪತ್ತೆಯಾಗಿದ್ದಾರೆ. ಹಾಗೂ ಆರು ಜನರನ್ನು ರಕ್ಷಿಸಲಾಗಿದೆ. ಸಧ್ಯ ಪತ್ತೆಯಾಗಿರುವವರ ಶೋಧ ಕಾರ್ಯಾಚರಣೆ ಮುಂದುವರೆದಿದೆ. 15 ಮೃತ ದೇಹಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದೆ. ಮೂರು ರಕ್ಷಣಾ ದೋಣಿಗಳು, ಎರಡು ಮೀನುಗಾರಿಕಾ ದೋಣಿಗಳು ಮತ್ತು ಆರು ಜನ ಮುಳುಗು ತಜ್ಞರುಗಳನ್ನು ಹುಡುಕಾಟಕ್ಕೆ ನಿಯೋಜಿಸಲಾಗಿದೆ" ಎಂದು ಅರಾಫ್ ಹೇಳಿದ್ದಾರೆ.
ಇಂಡೋನೇಷ್ಯಾವು 17,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ದ್ವೀಪಸಮೂಹವಾಗಿದ್ದು, ಜಲಸಾರಿಗೆ ಪ್ರಮುಖವಾಗಿದೆ. ಆದರೇ ಸಡಿಲವಾದ ಸುರಕ್ಷತಾ ಮಾನದಂಡಗಳು ಮತ್ತು ಸಾಮರ್ಥ್ಯಕ್ಕೂ ಮೀರಿ ಜನರ ಪ್ರಯಾಣದಿಂದ ಆಗಾಗ್ಗೆ ಇಂತಹ ಘಟನೆಗಳು ಸಂಭವಿಸುತ್ತಿವೆ.
2018 ರಲ್ಲಿ, ಇಂಡೋನೇಷ್ಯಾದ ಉತ್ತರ ಸುಮಾತ್ರಾ ಪ್ರಾಂತ್ಯದ ಸರೋವರದಲ್ಲಿ ಸುಮಾರು 200 ಜನರಿದ್ದ ದೋಣಿ ಮುಳುಗಿ 167 ಜನರು ಸಾವನ್ನಪ್ಪಿದರು. 1999ರ ಫೆಬ್ರವರಿಯಲ್ಲಿ, 332 ಪ್ರಯಾಣಿಕರಿಂದ ತುಂಬಿದ್ದ ಹಡಗು ಮಗುಚಿ 300ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಕೇವಲ 20 ಜನರನ್ನು ಮಾತ್ರ ರಕ್ಷಣೆ ಮಾಡಲಾಗಿತ್ತು. ಇದು ಈವರೆಗಿನ ಹೆಚ್ಚಿನ ಜನ ಸಾವನ್ನಪ್ಪಿದ್ದ ಘಟನೆಯಾಗಿದೆ.
ಗ್ರೀಸ್ನಲ್ಲೂ ಇಂತಹದ್ದೇ ಘಟನೆ : ನೂರಾರು ವಲಸಿಗರನ್ನು ಹೊತ್ತೊಯ್ಯುತ್ತಿದ್ದ ಮೀನುಗಾರಿಕಾ ದೋಣಿಯೊಂದು ಗ್ರೀಸ್ ಕರಾವಳಿಯಲ್ಲಿ ಮುಳುಗಿ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿ 500 ಜನ ನಾಪತ್ತೆಯಾಗಿದ್ದ ಘಟನೆ ಕಳೆದ ತಿಂಗಳಲ್ಲಿ ನಡೆದಿತ್ತು. ದೋಣಿಯಲ್ಲಿ 750 ಮಂದಿ ಪ್ರಯಾಣಿಸುತ್ತಿದ್ದರು ಎಂದು ಅಂದಾಜಿಸಲಾಗಿತ್ತು.
ನೈಋತ್ಯ ಕರಾವಳಿಯಿಂದ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ದೋಣಿ ಮಗುಚಿತ್ತು. ಸ್ಥಳದಿಂದ ರಕ್ಷಣಾ ತಂಡದವರು ಶೋಧ ಕಾರ್ಯ ಪ್ರಾರಂಭಿಸಿ, 104 ಜನರನ್ನು ರಕ್ಷಿಸಲಾಗಿತ್ತು. ಮತ್ತು 78 ಮೃತದೇಹಗಳನ್ನು ಪತ್ತೆ ಹಚ್ಚಲಾಗಿತ್ತು.
ಇದನ್ನೂ ಓದಿ: boat capsizes: ನದಿಯಲ್ಲಿ ಮುಳುಗಿದ 300 ಜನರಿದ್ದ ದೋಣಿ: ನೂರಾರು ಮದುವೆ ಅತಿಥಿಗಳ ಸಾವು