ಕ್ಯಾನ್ಬೆರಾ (ಆಸ್ಟ್ರೇಲಿಯಾ): ಆಸ್ಟ್ರೇಲಿಯಾದ ಅತಿದೊಡ್ಡ ಜಲವಿದ್ಯುತ್ ಉತ್ಪಾದನಾ ಕಂಪನಿ ಹಾಗೂ ಟ್ಯಾಸ್ಮೆನಿಯಾ ರಾಜ್ಯದ 28 ಪ್ರಮುಖ ಅಣೆಕಟ್ಟುಗಳನ್ನು ನಿರ್ವಹಿಸುತ್ತಿರುವ ಹೈಡ್ರೊ ಟ್ಯಾಸ್ಮೆನಿಯಾ ಕಂಪನಿಯು ಜಲಾಶಯಗಳಿಗೆ ಯಾವುದೇ ರೀತಿ ಧಕ್ಕೆ ಉಂಟಾಗದಿರಲು ಅವುಗಳ ಹಿಂಭಾಗ ಬೆಳೆದಿರುವ ಕಳೆ ನಾಶಪಡಿಸಲು ಡ್ರೋನ್ಗಳ ಮೂಲಕ ಔಷಧ ಸಿಂಪಡಿಸುತ್ತಿದೆ.
ಕಂಪನಿಯ ವಕ್ತಾರ ಟೋನಿ ಹ್ಯಾರೀಸ್ ಮಾತನಾಡಿ, ಅಣೆಕಟ್ಟು ಹಿಂಬಂದಿಯಲ್ಲಿ ಅಪಾರ ಪ್ರಮಾಣದಲ್ಲಿ ಕಳೆ ಬೆಳೆದಿದೆ. ಅಲ್ಲದೆ, ಮರಗಳು ಬೆಳೆದಿವೆ. ಇದರಿಂದಾಗಿ ಜಲಾಶಯಗಳಿಗೆ ಧಕ್ಕೆ ಉಂಟಾಗಿತ್ತು. ಹೀಗಾಗಿ 330 ಅಡಿ ಎತ್ತರವಿರುವ (100 ಮೀಟರ್) ಅಣೆಕಟ್ಟು ಹಿಂಬದಿ ಬೆಳೆದ ಕಳೆ ನಾಶಪಡಿಸಲು ನಿರ್ದಿಷ್ಟವಾಗಿ ಕಾರ್ಯನಿರ್ವಹಿಸುತ್ತೇವೆ. ಜಲಾಶಯಗಳ ಸುರಕ್ಷತೆಗಾಗಿ ಈ ಕಾರ್ಯಕ್ಕೆ ಮುಂದಾಗಿದ್ದೇವೆ ಎಂದರು.
ಔಷಧ ಸಿಂಪಡಿಸುವ ಸಂದರ್ಭದಲ್ಲಿ ಅಡ್ಡವಿರುವ ಬಂಡೆಗಳನ್ನು ಸ್ವಲ್ಪ ಪ್ರಮಾಣದಲ್ಲಿ ಜರುಗಿಸಲಾಗುತ್ತದೆ. ಜಲಾಶಯಗಳಿಗಿರುವ ಅಪಾಯವನ್ನು ಹೋಗಲಾಡಿಸಲು ಈ ಡ್ರೋನ್ ನಿರ್ಮಿಸಲಾಗಿದೆ. ಅಲ್ಲದೆ, ಇದು ತುಂಬಾ ಉಪಯುಕ್ತವಾಗಿದ್ದು, ಜಾಗತಿಕ ಮಾರುಕಟ್ಟೆಗೆ ಬಿಟ್ಟಿಲ್ಲ. ಆದರೆ, ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಚಿಂತನೆ ನಡೆಸಲಾಗಿದೆ ಎಂದರು.
ಡ್ರೋನ್ 20-30 ಕೆ.ಜಿ ತೂಕ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುತ್ತದೆ. ಈ ಮೊದಲು ಕಳೆ ನಾಶಪಡಿಸಲು 4 ದಿನಗಳ ಕಾಲ ಸಮಯ ಹಿಡಿಯುತ್ತಿತ್ತು. ಈ ನೂತನ ತಂತ್ರಜ್ಞಾನದಿಂದ ಅದೀಗ ಒಂದು ದಿನಕ್ಕಿಂತ ಕಡಿಮೆ ಸಮಯದಲ್ಲೇ ಕಳೆ ನಾಶಪಡಿಸಲಿದೆ. ಈ ಡ್ರೋನ್ನ ಇಬ್ಬರು ನಿರ್ವಹಣೆ ಮಾಡಬೇಕಿದೆ. ಈ ಡ್ರೋನ್ ಭವಿಷ್ಯದಲ್ಲಿ ಪ್ರಮುಖ ಪಾತ್ರವಹಿಸಲಿದೆ. ಈ ಡ್ರೋನ್ ತಯಾರಿಕೆ ಸಲುವಾಗಿ ಉದ್ಯೋಗದ ಪ್ರಮಾಣವನ್ನು ಹೆಚ್ಚಿಸುತ್ತದೆ.