ಗಾಜಾ ಸಿಟಿ: ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್‌ನ ಹಮಾಸ್ ಬಂಡುಕೋರರ ನಡುವೆ ಸಂಘರ್ಷದಲ್ಲಿ ಮೂವರು ಇಸ್ರೇಲಿಗರು ಸೇರಿ ಒಟ್ಟು 32 ಮಂದಿ ರಾಕೆಟ್ ದಾಳಿಯಲ್ಲಿ ಬಲಿಯಾಗಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಘರ್ಷಣೆಯು ಮಂಗಳವಾರ ಉಲ್ಬಣಗೊಂಡಿದೆ. ಇಸ್ರೇಲ್ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದರೇ ಅತ್ತ ಹಮಾಸ್ ಬಂಡುಕೋರರೂ ಇಸ್ರೇಲ್ ಸೇನಾಪಡೆ ಮೇಲೆ ಸರಣಿ ರಾಕೆಟ್ ದಾಳಿ ನಡೆಸಿದ್ದಾರೆ. ಇದರಲ್ಲಿ ಇಬ್ಬರು ಇಸ್ರೇಲಿ ಅಧಿಕಾರಿಗಳು ಮೃತಪಟ್ಟಿದ್ದಾರೆ. ಇದರೊಂದಿಗೆ ಗಾಜಾ ಪಟ್ಟಿಯಲ್ಲಿ ಉದ್ವಿಗ್ನತೆ ತೀವ್ರಗೊಂಡಿದೆ.
ಗಾಜಾ ಪಟ್ಟಿಯಿಂದ ರಾಕೆಟ್ ಮತ್ತು ವೈಮಾನಿಕ ದಾಳಿಗಳು ದಿನವಿಡೀ ಬಹುತೇಕ ತಡೆರಹಿತವಾಗಿ ಮುಂದುವರೆದವು. ಇಸ್ರೇಲ್ ಮತ್ತು ಹಮಾಸ್ ನಡುವಿನ 2014ರ ಯುದ್ಧದ ನಂತರದ ಅತ್ಯಂತ ತೀವ್ರವಾದ ಹೋರಾಟವು ಕಂಡುಬಂದಿದೆ.
ಸೋಮವಾರ ಸೂರ್ಯೋದಯದ ನಂತರ ಗಾಜಾದಲ್ಲಿ 10 ಮಕ್ಕಳು ಮತ್ತು ಒಬ್ಬ ಮಹಿಳೆ ಸೇರಿದಂತೆ 32 ಜನರು ಸಾವನ್ನಪ್ಪಿದ್ದಾರೆ. ಹೆಚ್ಚಿನವರು ವೈಮಾನಿಕ ದಾಳಿಯಿಂದ ಮೃತರಾಗಿದ್ದಾರೆ ಎಂದು ಇಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸತ್ತವರಲ್ಲಿ ಕನಿಷ್ಠ 16 ಮಂದಿ ಉಗ್ರರಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಪಡೆ ಹೇಳಿದೆ.
ದಕ್ಷಿಣ ನಗರದ ಅಶ್ಕೆಲೋನ್‌ನಲ್ಲಿನ ಮನೆಗಳಿಗೆ ತಾಗಿದ ಗಾಜಾದ ಗುಂಡುಗಳಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಪ್ರಸ್ತುತ ಹಿಂಸಾಚಾರದಲ್ಲಿ ಮೊದಲ ಬಾರಿಗೆ ಇಸ್ರೇಲಿಗರ ಸಾವು ದಾಖಲಾಗಿದ್ದು, ಸೋಮವಾರ ಸಂಜೆಯಿಂದ ಕನಿಷ್ಠ 10 ಇಸ್ರೇಲಿಗರು ಗಾಯಗೊಂಡಿದ್ದಾರೆ.