ನವದೆಹಲಿ: ಪ್ರವಾಸಿಗರಿಗೆ, ಗ್ರಾಹಕರಿಗೆ ಹೋಟೆಲ್‌ಗಳ ರೂಮ್ಸ್ ಬಗ್ಗೆ ಮಾಹಿತಿ ಒದಗಿಸುವ ಒಯೊ (ಒವೈಒ) ಸ್ಟಾರ್ಟಪ್ ಕಂಪನಿಯು ಮಧ್ಯಪ್ರಾಚ್ಯದ 'ಯುಎಇ'ನಲ್ಲಿ (ಯುನೈಟೆಡ್ ಅರಬ್ ಎಮರೈಟ್ಸ್) ತನ್ನ ಸೇವೆಯನ್ನು ವಿಸ್ತರಿಸಿದೆ.
ಯುಎಇನಲ್ಲಿ 10ಕ್ಕೂ ಹೆಚ್ಚು ಪೂರ್ಣ ಮತ್ತು ಅರೆಕಾಲಿಕ ಫ್ರ್ಯಾಂಚೈಸಿ ಸೇವೆಗಳನ್ನು ನೀಡಲು ದುಬೈ, ಷಾರ್ಜಾ ಮತ್ತು ಫುಜೈರಾದಲ್ಲಿನ ಹೊಟೇಲ್ಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ. 2020ರ ವೇಳೆಗೆ ಯುಎಇನ 7 ಪ್ರದೇಶಗಳಲ್ಲಿನ 150 ಹೊಟೇಲ್ಗಳಲ್ಲಿ 12,000 ಕೋಣೆಗಳನ್ನು ಗ್ರಾಹಕರಿಗೆ ಆತಿಥ್ಯ ನೀಡುವ ಗುರಿ ಒಯೊ ಇರಿಸಿಕೊಂಡಿದೆ.
2020ರ ವೇಳೆಗೆ 170ಕ್ಕೂ ಹೆಚ್ಚಿನ ರಾಷ್ಟ್ರಗಳಿಗೆ ನಮ್ಮ ಮಾರುಕಟ್ಟೆಯನ್ನು ಉನ್ನತ ಹಂತಕ್ಕೆ ತೆಗೆದುಕೊಂಡು ಹೋಗುವುದಾಗಿ ವಿಶ್ವ ಎಕ್ಸ್ ಪೋದಲ್ಲಿ ನಿರ್ಧರಿಸಲಾಗಿತ್ತು. ಹೀಗಾಗಿ, ಇತರೆ ರಾಷ್ಟ್ರಗಳಂತೆ ಮಧ್ಯಪ್ರಾಚ್ಯದ ಯುಎಇಗೆ ವಿಶೇಷ ಆದ್ಯತೆ ನೀಡಲಾಗುತ್ತದೆ ಎಂದು ಒಐಒ ಸ್ಥಾಪಕ, ಸಿಇಒ ರಿತೇಶ್ ಅಗರವಾಲ್ ಹೇಳಿದರು.
ಬಜೆಟ್ ಮತ್ತು ಮಧ್ಯಮ ವಲಯದ ಹೊಟೇಲ್ ಉದ್ಯಮದ ಗ್ರಾಹಕರಿಗೆ ಮಾಹಿತಿಯ ಆತಿಥ್ಯ ನೀಡವಲ್ಲಿ ಒಯೊ ಮುಂಚೂಣಿಯಲ್ಲಿದ್ದು, ಕಳೆದ ಕೆಲ ವರ್ಷಗಳಿಂದ ಸಾಕಷ್ಟು ಬದಲಾವಣೆ ತಂದಿದೆ. ಸ್ವತಂತ್ರ ಹೋಟೆಲ್ ಮಾಲೀಕರ ಅನುಕೂಲಕ್ಕೆ ತಕ್ಕಂತೆ ಒಯೊ ನಿರ್ವಾಹಕ ಪರಿಣಿತರು ಮತ್ತು ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದೆ. 2019ರ ಅಂತ್ಯದ ವೇಳೆಗೆ ಯುಎಇನಲ್ಲಿ 4,000 ನೇರ ಮತ್ತು ಸಾವಿರಾರು ಪರೋಕ್ಷ ಉದ್ಯೋಗಗಳನ್ನು ಸೃಜಿಸುವುದಾಗಿ ಹೇಳಿದರು.
'ಒಯೊ' ಸ್ಟಾರ್ಟ್ಆ್ಯಪ್ ಒಬ್ಬ ಕಾಲೇಜ್ ಡ್ರಾಪೌಟ್ನಿಂದ ಜನ್ಮ ತಳೆದದ್ದು...
ಒಡಿಶಾ ಮೂಲದ ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ರಿತೇಶ್ ಅಗರವಾಲ್ 17ನೇ ವಯಸ್ಸಿನಲ್ಲಿ ಕಾಲೇಜ್ ಡ್ರಾಪೌಟ್ ಆಗಿ ಬಜೆಟ್ ಹೋಟೆಲ್‌ಗಳ ನೆಟ್‌ವರ್ಕ್ ಒಯೊ (ಒವೈಒ) ಸ್ಟಾರ್ಟಪ್ ಸ್ಥಾಪಿಸಿ 22ಕ್ಕೆ ಮಿಲಿಯನೇರ್ ಆದ. ಇಂದು ಒಯೊ ಸ್ಟಾರ್ಟಪ್ ಗ್ರಾಹಕರಿಗೆ 65,000ಕ್ಕೂ ಹೆಚ್ಚು ಹೋಟೆಲ್ ರೂಮ್‌ಗಳ ನೆಟ್‌ವರ್ಕ್ ಅನ್ನು ಒದಗಿಸುತ್ತಿದೆ. 170 ನಗರಗಳಲ್ಲಿ ಇವರ ಸ್ಟಾರ್ಟಪ್ ಬಜೆಟ್ ಹೋಟೆಲ್‌ಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಆ್ಯಪ್ ಆಧಾರಿತ ಉಬರ್ ಕಂಪನಿ ಜನರಿಗೆ ಟ್ಯಾಕ್ಸಿ ಸೇವೆಯನ್ನು ಒದಗಿಸುತ್ತದೆಯೋ, ಅದೇ ರೀತಿ ಒಯೊ ರೂಮ್ಸ್ ಸ್ಟಾರ್ಟಪ್ ತಂತ್ರಜ್ಞಾನ ನೆರವಿನಿಂದ ಬಜೆಟ್ ಹೋಟೆಲ್ ರೂಮ್‌ಗಳ ಸೇವೆಯನ್ನು ಒದಗಿಸುತ್ತದೆ.
ಪ್ರಸ್ತುತ ಮಧ್ಯಪ್ರಾಚ್ಯ, ಭಾರತ, ಚೀನಾ, ಮಲೇಷಿಯಾ, ನೇಪಾಳ, ಯುಕೆ ಮತ್ತು ಯುಎಇ ಸೇರಿದಂತೆ ಆರು ದೇಶಗಳಲ್ಲಿ ಸುಮಾರು 12,000 ಆಸ್ತಿ ಪಾಲುದಾರರೊಂದಿಗೆ 350ಕ್ಕೂ ಹೆಚ್ಚು ನಗರಗಳಲ್ಲಿ ಸ್ಟಾರ್ಟಪ್ ತಂತ್ರಜ್ಞಾನ ನೆರವಿನಿಂದ ಬಜೆಟ್ ಹೋಟೆಲ್ ರೂಮ್‌ಗಳ ಸೇವೆ ಕಲ್ಪಿಸುತ್ತಿದೆ.