ಗಾಜಾ ಸಿಟಿ : ಇಲ್ಲಿನ ಟವರ್ ಬ್ಲಾಕ್ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ 200 ಕ್ಕೂ ಅಧಿಕ ರಾಕೆಟ್‌ಗಳನ್ನು ಇಸ್ರೇಲ್ ಮೇಲೆ ಹಾರಿಸಲಾಗಿದೆ ಎಂದು ಪ್ಯಾಲೆಸ್ತೀನಿಯನ್ ಉಗ್ರಗಾಮಿ ಗುಂಪು ಹಮಾಸ್ ಹೇಳಿದೆ.
ಪ್ಯಾಲೆಸ್ತೀನಿಯನ್ ನಾಗರಿಕರ ಮೇಲಿನ ದಾಳಿಗೆ ಪ್ರತೀಕಾರವಾಗಿ, ಟೆಲ್ ಅವೀವ್ ನಗರದ ಕಡೆಗೆ 110 ರಾಕೆಟ್‌ಗಳನ್ನು ಹಾರಿಸುವ ಕಾರ್ಯ ಪ್ರಗತಿಯಲ್ಲಿದೆ. 100 ರಾಕೆಟ್‌ಗಳನ್ನು ದಕ್ಷಿಣದ ಪಟ್ಟಣವಾದ ಬೀರ್‌ಶೆವಾ ಕಡೆಗೆ ಹಾರಿಸಲಾಗಿದೆ ಎಂದು ಹಮಾಸ್ ಹೇಳಿಕೊಂಡಿದೆ. ಈ ನಡುವೆ ಟೆಲ್ ಅವೀವ್ ನಗರದ ನಿವಾಸಿಗಳು ಬಾಂಬ್ ಶೆಲ್ಟರ್ಗಳ ಕಡೆಗೆ ಓಡಿದ್ದಾರೆ ಎಂದು ಇಸ್ರೇಲ್ ಭದ್ರತಾ ಪಡೆ ತಿಳಿಸಿದೆ.
ಇದನ್ನೂ ಓದಿ: ಗಾಜಾ ಮೇಲಿನ ರಾಕೆಟ್ ದಾಳಿಗೆ ಭಾರತ ಖಂಡನೆ: ಶಾಂತಿ ಮಾತುಕತೆಗೆ ಒತ್ತಾಯ
ಇಸ್ರೇಲ್ ಗಾಜಾದ 9 ಅಂತಸ್ತಿನ ಕಟ್ಟಡವನ್ನು ನಾಶಪಡಿಸಿದೆ. ಇದನ್ನು ತಡೆಯಲು ಹೋದ ನಮಗೆ ದಿಗ್ಭಂಧನ ಹಾಕಿತ್ತು. ಇಸ್ರೇಲ್ ದಾಳಿಯಿಂದ ಗಾಜಾದ ಟವರ್ ಬ್ಲಾಕ್ ಮತ್ತು ಸುತ್ತಮುತ್ತಲಿನ ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಹಮಾಸ್ ತನ್ನ ಟಿವಿ ಚಾನೆಲ್ ಅಲ್ ಅಕ್ಸಾ ಟಿವಿಯಲ್ಲಿ ವರದಿ ಮಾಡಿದೆ. ಮನೆಗಳು, ವಾಣಿಜ್ಯ ಕಟ್ಟಡಗಳು, ಸ್ಥಳೀಯ ಟಿವಿ ವಾಹಿನಿಗಳ ಮೇಲೆ ಕ್ಷಿಪಣಿ ದಾಳಿ ನಡೆಸಲಾಗಿದೆ ಎಂದು ಅದು ಹೇಳಿದೆ.
ಮಂಗಳವಾರ ಗಾಜಾ ಪಟ್ಟಿಯಿಂದ ನಡೆದ ರಾಕೆಟ್ ದಾಳಿಯಲ್ಲಿ ಮೂವರು ಇಸ್ರೇಲಿಗರು ಸೇರಿದಂತೆ 35 ಮಂದಿ ಮೃತಪಟ್ಟಿದ್ದಾರೆ. 220 ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.