ಪ್ಯೊಂಗ್ಯಾಂಗ್ : ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರು ಕಠಿಣ ಶಿಸ್ತನ್ನು ಅನುಸರಿಸಲು ಸೇನೆಗೆ ಕರೆ ನೀಡಿದ್ದಾರೆ.
ಕೇಂದ್ರ ಮಿಲಿಟರಿ ಆಯೋಗದ ವಿಸ್ತೃತ ಸಭೆಯ ಅಧ್ಯಕ್ಷತೆ ವಹಿಸಿದ್ದ ವೇಳೆ ನೌಕಾಪಡೆ ಮತ್ತು ವಾಯುಪಡೆಯ ಹೊಸ ಮುಖ್ಯಸ್ಥರನ್ನು ಅವರು ನೇಮಕ ಮಾಡಿದ್ದಾರೆ ಎಂದು ರಾಜ್ಯ ಮಾಧ್ಯಮಗಳು ವರದಿ ಮಾಡಿವೆ. ಈ ಸಭೆ ಬುಧವಾರ ಆಡಳಿತ ಪಕ್ಷದ ಪ್ರಧಾನ ಕಚೇರಿಯಲ್ಲಿ ಜರುಗಿದೆ.
ಸಭೆಯಲ್ಲಿ ಕೆಪಿಎ (ಕೊರಿಯನ್ ಪೀಪಲ್ಸ್ ಆರ್ಮಿ) ಕಮಾಂಡಿಂಗ್ ಅಧಿಕಾರಿಗಳ ಮಿಲಿಟರಿ ಮತ್ತು ರಾಜಕೀಯ ಚಟುವಟಿಕೆಗಳು ಮತ್ತು ನೈತಿಕ ಜೀವನದಲ್ಲಿ ಬಹಿರಂಗಪಡಿಸಿದ ವಿಷಯಗಳ ಬಗ್ಗೆ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಹಾಗೆ ಮುಖ್ಯವಾಗಿ ಕೆಪಿಎ ಒಳಗೆ ಕ್ರಾಂತಿಕಾರಿ ನೈತಿಕ ಶಿಸ್ತನ್ನು ಸಂಪೂರ್ಣವಾಗಿ ಸ್ಥಾಪಿಸುವ ವಿಷಯದ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕೆಪಿಎ ಅಸ್ತಿತ್ವಕ್ಕೆ ಶಿಸ್ತು ಅತ್ಯಗತ್ಯ ಎಂದು ಕಿಮ್ ಆದೇಶ ನೀಡಿದ್ದಾರೆ. ಕಮಾಂಡಿಂಗ್ ಅಧಿಕಾರಿಗಳಿಗೆ ಸರಿಯಾದ ರಾಜಕೀಯ ಪ್ರಜ್ಞೆ ಮತ್ತು ನೈತಿಕ ನಂಬಿಕೆಗಳ ಬಗ್ಗೆ ಖಚಿತಪಡಿಸಿಕೊಳ್ಳಲು 'ಶಿಕ್ಷಣ ಮತ್ತು ನಿಯಂತ್ರಣ' ವ್ಯವಸ್ಥೆ ಹೆಚ್ಚಿಸುವ ಬಗ್ಗೆ ಚರ್ಚೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಈ ವೇಳೆ, ಕೇಂದ್ರ ಮಿಲಿಟರಿ ಆಯೋಗವು ಕಿಮ್ ಸಾಂಗ್ ಗಿಲ್ ಅವರನ್ನು ನೌಕಾಪಡೆಯ ಕಮಾಂಡರ್ ಆಗಿ ನೇಮಕ ಮಾಡಲಾಗಿದೆ. ಹಾಗೆಯೇ ಅವರಿಗೆ ವೈಸ್ ಅಡ್ಮಿರಲ್ ಆಗಿ ಬಡ್ತಿ ನೀಡಲಾಗಿದೆ. ಕಿಮ್ ಚುಂಗ್ ಅವರನ್ನು ವಾಯು ಮತ್ತು ವಾಯು ವಿರೋಧಿ ದಳದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದ್ದು, ಇವರಿಗೂ ಕೂಡ ಲೆಫ್ಟಿನೆಂಟ್ ಜನರಲ್ ಆಗಿ ಬಡ್ತಿ ನೀಡಲಾಗಿದೆ. ಇದೇ ವೇಳೆ, ಹಲವಾರು ಕಮಾಂಡಿಂಗ್ ಅಧಿಕಾರಿಗಳನ್ನು ಲೆಫ್ಟಿನೆಂಟ್ ಜನರಲ್ ಮತ್ತು ಮೇಜರ್ ಜನರಲ್ ಆಗಿ ಬಡ್ತಿ ನೀಡಲಾಗಿದೆ.
ಉತ್ತರ ಕೊರಿಯಾದ ನೀರಿನಲ್ಲಿ ಆಕಸ್ಮಿಕವಾಗಿ ಈಜುತ್ತಿದ್ದ ದಕ್ಷಿಣ ಕೊರಿಯಾದ ಮೀನುಗಾರಿಕಾ ಅಧಿಕಾರಿಯೊಬ್ಬರು ಮಿಲಿಟರಿಯಿಂದ ಗುಂಡಿಕ್ಕಿ ಕೊಲ್ಲಲ್ಪಟ್ಟ 2020 ರ ಘಟನೆಯ ನಂತರ ವಾಯುಪಡೆ ಮತ್ತು ನೌಕಾಪಡೆಯ ಪುನರ್ ರಚನೆಯು ಗಡಿ ಭದ್ರತೆಯನ್ನು ಬಲಪಡಿಸುವುದಕ್ಕೆ ಸಂಬಂಧಿಸಿದೆ ಎಂದು ಮಾಧ್ಯಮಗಳು ಅಭಿಪ್ರಾಯ ವ್ಯಕ್ತಪಡಿಸಿವೆ.