ಬಾಗ್ದಾದ್ (ಇರಾಕ್): ಭೀಕರ ಆತ್ಮಾಹುತಿ ಬಾಂಬ್ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊತ್ತಿಕೊಂಡಿದೆ.
ಐಸಿಸ್ ಸಂಘಟನೆಯ ಅಂಗಸಂಸ್ಥೆಯೊಂದು ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿದೆ. ಈ ದಾಳಿಯನ್ನು ‘ಧರ್ಮಭ್ರಷ್ಟ ಶಿಯಾಗಳನ್ನು ಗುರಿಯಾಗಿಸಿಕೊಂಡು ಮಾಡಲಾಗಿದೆ’ ಎಂದು ಹೇಳಿದೆ. ಮೊದಲ ಬಾಂಬ್ ದಾಳಿಯನ್ನು ಅಬು ಯೂಸೆಫ್ ಅಲ್-ಅನ್ಸಾರಿ ಮತ್ತು ಎರಡನೇ ದಾಳಿಯನ್ನು ಮೊಹಮ್ಮದ್ ಆರಿಫ್ ಅಲ್-ಮುಹಾಜಿರ್ ನಡೆಸಿದ್ದಾರೆ ಎಂದು ತಿಳಿಸಿದೆ.
ಗುರವಾರ ನಡೆದ ಈ ಸ್ಫೋಟದಲ್ಲಿ ಕನಿಷ್ಠ 32 ಜನರು ಮೃತಪಟ್ಟಿದ್ದು, 110ಕ್ಕೂ ಹೆಚ್ಚು ಜನರಿಗೆ ಗಾಯವಾಗಿದೆ. ಹಲವರ ಸ್ಥಿತಿ ಗಂಭೀರವಾಗಿದೆ ಎನ್ನಲಾಗಿದೆ.
ಮಾರುಕಟ್ಟೆ ಮಧ್ಯದಲ್ಲಿ ವ್ಯಕ್ತಿಯೊಬ್ಬರು ಮೂರ್ಛೆ ತಪ್ಪಿ ಬಿದ್ದಿದ್ದಾರೆಂದು ಕೂಗಿದ ನಂತರ ಜನರೆಲ್ಲ ಒಂದೆಡೆ ಸೇರಿದರು. ಈ ವೇಳೆ ದುಷ್ಕರ್ಮಿಗಳು ಆತ್ಮಾಹುತಿ ಬಾಂಬ್ ಸ್ಫೋಟಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರ್ಘಟನೆ ಇರಾಕ್ ಜನತೆಯಲ್ಲಿ ಭೀತಿಯನ್ನುಂಟು ಮಾಡಿದೆ. ಕಳೆದ ಮೂರು ವರ್ಷಗಳಿಂದ ಇಂತಹ ಯಾವುದೇ ಘಟನೆಗಳು ಸಂಭವಿಸಿರಲಿಲ್ಲ.