ಅಂಕಾರಾ(ಟರ್ಕಿ): ದಕ್ಷಿಣ ಟರ್ಕಿಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 9 ರೋಗಿಗಳು ಅಗ್ನಿ ಅವಘಡದಿಂದ ಪ್ರಾಣಬಿಟ್ಟಿದ್ದಾರೆ.
ಇಸ್ತಾಂಬುಲ್‌ನ ಗಾಜಿಯಾಂಟೆಪ್‌ನಲ್ಲಿರುವ ಖಾಸಗಿ ಸ್ಯಾಂಕೊ ಯೂನಿವರ್ಸಿಟಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಬೆಳಗ್ಗೆ 4 ಸುಮಾರಿಗೆ ಆಮ್ಲಜನಕದ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂಬತ್ತು ಮಂದಿ ಕೋವಿಡ್ ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಆರೋಗ್ಯ ಸಚಿವರು ತಿಳಿಸಿದ್ದಾರೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ಜಾಗೃತರಾದ ಆಸ್ಪತ್ರೆ ಸಿಬ್ಬಂದಿ, ಬೆಂಕಿ ನಂದಿಸುವ ಮೂಲಕ ಭಾರಿ ಅನಾಹುತ ತಪ್ಪಿಸಿದ್ದಾರೆ. ದುರ್ಘಟನೆಯಲ್ಲಿ ಸಾವನ್ನಪ್ಪಿದವರು ಸುಮಾರು 56 ರಿಂದ 85 ವರ್ಷ ವಯಸ್ಸಿನರಾಗಿದ್ದು, ಐಸಿಯುನಲ್ಲಿದ್ದ ಇತರೆ 14 ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಆಸ್ಪತ್ರೆಯು ಪ್ರಕಟಣೆಯಲ್ಲಿ ತಿಳಿಸಿದೆ.