ಸಿಡ್ನಿ: ಹೊಸ ವರ್ಷದ ದಿನವೇ ಆಸ್ಟ್ರೇಲಿಯಾ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ರಾಷ್ಟ್ರಗೀತೆಯಲ್ಲಿನ ಒಂದು ಪದ ಬದಲಿಸಿ ಆದೇಶ ಹೊರಡಿಸಿದೆ.
ಸ್ಥಳೀಯರಿಗೆ ಗೌರವ ಸೂಚಿಸುವ ಹಾಗೂ ಏಕತಾ ಮನೋಭಾವ ಹೆಚ್ಚಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅಲ್ಲಿನ ಪ್ರಧಾನಿ ಸ್ಕಾಟ್ ಮಾರಿಸನ್ ತಿಳಿಸಿದ್ದಾರೆ.
ರಾಷ್ಟ್ರಗೀತೆಯಲ್ಲಿ ಇಷ್ಟು ದಿನ ಬಳಕೆ ಮಾಡಲಾಗುತ್ತಿದ್ದ, 'ನಾವು ಯುವಕರು ಮತ್ತು ಮುಕ್ತರು' ಎಂಬ ಪದದ ಬದಲಿಗೆ ಇದೀಗ 'ನಾವು ಒಬ್ಬರು ಮತ್ತು ಸ್ವತಂತ್ರರು' ಎಂಬ ಪದ ಬಳಕೆ ಮಾಡಲು ನಿರ್ಧರಿಸಿದೆ.
ಅಲ್ಲಿನ ಸರ್ಕಾರ ತೆಗೆದುಕೊಂಡಿರುವ ಈ ದಿಢೀರ್ ನಿರ್ಧಾರಕ್ಕೆ ಆಸ್ಟ್ರೇಲಿಯಾದ ಜನತೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬದಲಾವಣೆಯಿಂದ ಆಸ್ಟ್ರೇಲಿಯಾ ಜನತೆಯಲ್ಲಿ ಮತ್ತಷ್ಟು ಏಕತಾ ಮನೋಭಾವ ಉಂಟಾಗಲಿದೆ ಎಂಬ ವಿಶ್ವಾಸವಿದೆ ಎಂದು ಪ್ರಧಾನಿ ತಿಳಿಸಿದರು.
ಬಹುಸಂಸ್ಕೃತಿಯ ನಾಡಾಗಿರುವ ಆಸ್ಟ್ರೇಲಿಯಾದ ಪೂರ್ವಜರು ನಮಗೆ ಅಪಾರ ಕೂಡುಗೆ ನೀಡಿದ್ದಾರೆ ಎಂದು ಪ್ರಧಾನಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸರ್ಕಾರದ ವಿಪಕ್ಷ ನಾಯಕ ಆಂಥೋನಿ ಅಲ್ಬನೀಸ್, ಭೂಮಿಯ ಮೇಲಿನ ಅತ್ಯಂತ ಹಳೆಯ ನಾಗರಿಕತೆಯಲ್ಲಿ ಆಸ್ಟ್ರೇಲಿಯಾ ಕೂಡ ಒಂದು. ಇದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದು ಹೇಳಿದ್ದಾರೆ.