ಗಾಜಾ: ಗಾಜಾ ನಗರದಲ್ಲಿ ಇಸ್ರೇಲಿ ನಡೆಸಿದ ವಾಯುದಾಳಿಯಿಂದ ಆರು ತಿಂಗಳ ಮಗು ಮಾತ್ರ ಬದುಕುಳಿದಿದ್ದು, ತನ್ನ ಕುಟುಂಬದ ಸುಮಾರು 10 ಮಂದಿ ಸದಸ್ಯರನ್ನು ಕಳೆದುಕೊಂಡು ಅನಾಥವಾಗಿದೆ.
ಗಾಜಾದ ಹಮಾಸ್ ಬಂಡುಕೋರರೊಂದಿಗೆ ಆರಂಭಗೊಂಡ ಇಸ್ರೇಲ್ ಮಿಲಿಟರಿ ಪಡೆಯ ಯುದ್ಧ ತೀವ್ರತೆ ಪಡೆದುಕೊಳ್ಳುತ್ತಿದೆ.
ಇನ್ನು ಬದುಕುಳಿದ ಮಗುವಿನ ತಂದೆ ಹದೀದಿ ಅವರು ಈ ಬಗ್ಗೆ ಮಾತನಾಡಿದ್ದು, ಈದ್ ಉಲ್ - ಫಿತರ್ ಹಬ್ಬದ ಹಿನ್ನೆಲೆಯಲ್ಲಿ ಪತ್ನಿ ಮತ್ತು ಮಕ್ಕಳು ಗಾಜಾಕ್ಕೆ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ದಾಳಿ ನಡೆದಿದ್ದು, ಪತ್ನಿ ಮತ್ತು 6 ರಿಂದ 14 ವರ್ಷದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. 11 ವರ್ಷದ ಮಗು ಕಾಣೆಯಾಗಿದೆ. ಇನ್ನು ಆರು ತಿಂಗಳ ಮಗ ಒಮರ್ ಮಾತ್ರ ಬದುಕುಳಿದಿದ್ದಾನೆ ಎಂದು ಹೇಳಿದ್ದಾರೆ.
ಸದ್ಯ ಮಗುವನ್ನು ಗಾಜಾದ ಅಲ್ - ಶಿಫಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಯ ನಂತರ, ನೂರಾರು ದುಃಖತಪ್ತರಾದವರು ಗಾಜಾ ನಗರದ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಇಸ್ರೇಲಿ ವೈಮಾನಿಕ ದಾಳಿಯಿಂದ ಕೊಲ್ಲಲ್ಪಟ್ಟ ಕುಟುಂಬ ಸದಸ್ಯರ ಶವಗಳನ್ನು ಕಂಡು ಕಣ್ಣೀರಿಡುತ್ತಿದ್ದಾರೆ.
ಸೋಮವಾರ ರಾತ್ರಿ ಹಮಾಸ್ ಇಸ್ರೇಲ್ ಕಡೆಗೆ ನೂರಾರು ರಾಕೆಟ್ಗಳನ್ನು ಹಾರಿಸಿದೆ. ಇದಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾ ಪಟ್ಟಿ ಮೇಲೆ ವೈಮಾನಿಕ ದಾಳಿ ಮಾಡಿ ರಾಕೆಟ್ಗಳನ್ನೆಲ್ಲ ಹೊಡೆದುರುಳಿಸಿದೆ. ಗಾಜಾದಲ್ಲಿ 31 ಮಕ್ಕಳು ಮತ್ತು 20 ಮಹಿಳೆಯರು ಸೇರಿದಂತೆ ಸುಮಾರು 126 ಜನರು ಸಾವನ್ನಪ್ಪಿದ್ದಾರೆ. ಇಸ್ರೇಲ್ನಲ್ಲಿ 6 ವರ್ಷದ ಬಾಲಕ ಮತ್ತು ಸೈನಿಕ ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.