ಟೋಕಿಯೋ: ಒಲಿಂಪಿಕ್ಸ್ ಕ್ರೀಡಾಕೂಟವನ್ನು ಈ ಬಾರಿ ರದ್ದುಗೊಳಿಸಲಾಗುತ್ತದೆ ಎಂಬ ಮಾಧ್ಯಮಗಳ ವರದಿಯನ್ನು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಮತ್ತು ಸ್ಥಳೀಯ ಸಂಘಟಕರು ಅಲ್ಲಗಳೆದಿದ್ದಾರೆ.
ಒಲಿಂಪಿಕ್ಸ್ ಕ್ರೀಡಾಕೂಟ ಈ ವರ್ಷದ ಜುಲೈ 23ಕ್ಕೆ ಆರಂಭವಾಗಲಿದೆ. ಕೋವಿಡ್-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಈ ಹಿಂದೆ ಕ್ರೀಡಾಕೂಟವನ್ನು 10 ತಿಂಗಳುಗಳ ಕಾಲ ಮುಂದೂಡಲಾಗಿತ್ತು.
ಅನಧಿಕೃತ ಸರ್ಕಾರಿ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಕ್ರೀಡಾಕೂಟವನ್ನು ರದ್ದುಗೊಳಿಸಲಾಗುತ್ತದೆ ಎಂದು ಪತ್ರಿಕೆಗಳು ವರದಿ ಮಾಡಿದ್ದವು. ಇದಕ್ಕೆ ಸಂಬಂಧಿಸಿದಂತೆ ಇದೀಗ ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ(ಐಒಸಿ)ಯ ಅಧ್ಯಕ್ಷ ಥಾಮಸ್ ಬಾಷ್ ಮತ್ತು ಸ್ಥಳೀಯ ಸಂಘಟಕರು ಮಾಹಿತಿ ನೀಡಿದ್ದು, ಒಲಿಂಪಿಕ್ಸ್ ಕ್ರೀಡೆಯನ್ನು ರದ್ದುಗೊಳಿಸಲಾಗುತ್ತದೆ ಅಥವಾ ಮುಂದೂಡಲಾಗುತ್ತಿದೆ ಎಂಬ ವರದಿ ಸುಳ್ಳು. ಈಗಾಗಲೇ ನಿಗದಿಯಾದ ದಿನಾಂಕದಿಂದ ಬೇಸಿಗೆ ಕ್ರೀಡಾಕೂಟ ಪ್ರಾರಂಭಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಒಲಿಂಪಿಕ್ಸ್ ನಿಗದಿಯಂತೆ ನಡೆಯಲಿದೆ. ಕ್ರೀಡಾ ಕೂಟಕ್ಕೆ ಪ್ರಧಾನಿ ಯೊಶಿಹಿಡೆ ಸುಗ ಅವರ ಸಂಪೂರ್ಣ ಬೆಂಬಲವಿದೆ. ಜೊತೆಗೆ ಸರ್ಕಾರ, ಟೋಕಿಯೋ ಮೆಟ್ರೋ ಪಾಲಿಟನ್ ಆಡಳಿತ, ಟೋಕಿಯೋ 2020 ಸಂಘಟನಾ ಸಮಿತಿ, ಐಒಸಿ ಮತ್ತು ಐಪಿಸಿ (ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ ಸಮಿತಿ) ಸೇರಿದಂತೆ ನಮ್ಮ ಎಲ್ಲಾ ಪಾಲುದಾರರು ಈ ಬೇಸಿಗೆ ಒಲಿಂಪಿಕ್ಸ್ ಆಯೋಜಿಸುವತ್ತ ಸಂಪೂರ್ಣ ಗಮನ ಹರಿಸಿದ್ದಾರೆ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.