ಸೌದಿ ಅರೇಬಿಯಾ: ಸೌದಿ-ಯುಎಇ ನೇತೃತ್ವದ ಮಿಲಿಟರಿ ಒಕ್ಕೂಟವು ಶನಿವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್-ಮಸ್ಲಬ್ ಜಿಲ್ಲೆಯಲ್ಲಿ ಕನಿಷ್ಠ 31 ಜನರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಅಲ್-ಜಾವ್ಫ್ ಗವರ್ನರೇಟ್‌ನ ಅಲ್-ಮಸ್ಲಬ್ ಜಿಲ್ಲೆಯ ಅಲ್-ಹಯಾಜಾ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದಾಳಿಯಲ್ಲಿ 31 ನಾಗರಿಕರು ಸಾವನ್ನಪ್ಪಿದ್ದು, 12 ಮಂದಿ ಗಾಯಗೊಂಡಿದ್ದಾರೆ ಎಂದು ಯುಎನ್ ನಿವಾಸಿ ಸಂಯೋಜಕರ ಕಚೇರಿ ಮತ್ತು ಯೆಮೆನ್‌ನ ಮಾನವೀಯ ಸಂಯೋಜಕ ಕಚೇರಿಯಿಂದ ಬಂದ ಪ್ರಾಥಮಿಕ ವರದಿ ಹೇಳಿದೆ.
ಅಲ್ ಜಜೀರಾ ಪ್ರಕಾರ, ಯೆಮೆನ್ ಹೌತಿಸ್ ಅವರು ಅದೇ ಪ್ರದೇಶದಲ್ಲಿ ಸೌದಿ ಫೈಟರ್ ಜೆಟ್ ಅನ್ನು ಉರುಳಿಸಿದ್ದಾರೆ ಎಂದು ಹೇಳಿದ, ಕೆಲವೇ ಗಂಟೆಗಳ ನಂತರ ಈ ವೈಮಾನಿಕ ದಾಳಿ ನಡೆಸಲಾಗಿದೆ.
ವಾಯುದಾಳಿ ಬಗ್ಗೆ ಪ್ರತಿಕ್ರಿಯಿಸಿದ ಯೆಮನ್‌ನ ಯುಎನ್‌ನ ಮಾನವೀಯ ಸಂಯೋಜಕರಾದ ಲಿಸ್ ಗ್ರಾಂಡೆ " ಈ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಗಳಿಗೆ ಸಂತಾಪವನ್ನು ಸೂಚಿಸಿದ್ದು, ಗಂಭೀರವಾಗಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಿ ಎಂದು ನಾವು ಪ್ರಾರ್ಥಿಸುತ್ತೇವೆ ಎಂದಿದ್ದಾರೆ.
ಯೆಮನ್‌ನಲ್ಲಿ ಎಷ್ಟೋ ಜನರನ್ನು ಕೊಲ್ಲಲಾಗುತ್ತಿದೆ. ಇದು ಒಂದು ದುರಂತ ಮತ್ತು ನ್ಯಾಯಸಮ್ಮತವಲ್ಲ. ಅಂತಾರಾಷ್ಟ್ರೀಯ ಮಾನವೀಯ ಕಾನೂನಿನ ಪ್ರಕಾರ, ಪಕ್ಷಗಳು ನಾಗರಿಕರನ್ನು ರಕ್ಷಿಸಲು ಬಾಧ್ಯತೆ ಹೊಂದಿದೆ" ಎಂದು ಲಿಸ್ ಗ್ರಾಂಡೆ ಹೇಳಿದ್ದಾರೆ.