ವಾಷಿಂಗ್ಟನ್ (ಅಮೆರಿಕ): ಯುದ್ಧ ಪೀಡಿತ ಉಕ್ರೇನ್‌ಗೆ ವಿಶ್ವಬ್ಯಾಂಕ್ ನೆರವಿಗೆ ಧಾವಿಸಿದ್ದು, 723 ಮಿಲಿಯನ್ ಡಾಲರ್ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ.
ರಷ್ಯಾ ದಾಳಿಯಿಂದ ನಲುಗಿರುವ ಉಕ್ರೇನ್‌ಗೆ ಬೆಂಬಲ ರೂಪವಾಗಿ ಪೂರಕ ಬಜೆಟ್ಗೆ ವಿಶ್ವ ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ. ಈ ಬಗ್ಗೆ ವಿಶ್ವಬ್ಯಾಂಕ್ ವೆಬ್ಸೈಟ್ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿದೆ.
723 ಮಿಲಿಯನ್ ಡಾಲರ್ಗಳ ಆರ್ಥಿಕ ನೆರವಿನಲ್ಲಿ 350 ಮಿಲಿಯನ್ ಪೂರಕ ಸಾಲವೂ ಒಳಗೊಂಡಿದೆ. ಈ ನೆರವು ಯುದ್ಧದಲ್ಲಿ ಸಿಲುಕಿರುವ ಉಕ್ರೇನ್ ಜನರ ಪರಿಹಾರ ಕಲ್ಪಿಸಲು, ಆರೋಗ್ಯ ಕಾರ್ಯಕರ್ತರಿಗೆ ವೇತನ ಬಿಡುಗಡೆ ಮಾಡಲು, ವಯಸ್ಸಾದವರಿಗೆ ಪಿಂಚಣಿ ನೀಡುವುದು ಹಾಗೂ ಸಾಮಾಜಿಕ ಕಾರ್ಯ ಕೈಗೆತ್ತಿಕೊಳ್ಳಲು ಅನುಕೂಲವಾಗಲಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ.
ಪಾಲುದಾರ ರಾಷ್ಟ್ರಗಳಾದ ನೆದರ್‌ಲ್ಯಾಂಡ್‌ನಿಂದ 89 ಮಿಲಿಯನ್ ಡಾಲರ್ ಮತ್ತು ಸ್ವೀಡನ್‌ನಿಂದ 50 ಮಿಲಿಯನ್ ಡಾಲರ್ಗಳ ಖಾತರಿ ಅನುದಾನಕ್ಕೆ ಹೆಚ್ಚಿಸಲಾಗಿದೆ. ಮಲ್ಟಿ-ಡೋನರ್ ಟ್ರಸ್ಟ್ ಫಂಡ್ (MDTF) ಸ್ಥಾಪನೆ ಕೂಡ ಮಾಡಲಾಗಿದೆ. ಇದರಿಂದ ಯುನೈಟೆಡ್ ಕಿಂಗ್ಡಮ್ (ಯುಕೆ), ಡೆನ್ಮಾರ್ಕ್, ಲಾಟ್ವಿಯಾ, ಲಿಥುವೇನಿಯಾ ಮತ್ತು ಐಸ್‌ಲ್ಯಾಂಡ್‌ನಲ್ಲಿ ದಾನಿಗಳಿಂದ 134 ಮಿಲಿಯನ್‌ನ ನೆರವು ಸಿಗಲಿದೆ ಎಂದು ತಿಳಿಸಿದೆ.
ರಷ್ಯಾದ ಆಕ್ರಮಣದಿಂದ ಉಂಟಾದ ಹಿಂಸಾಚಾರ ಹಿನ್ನೆಲೆಯಲ್ಲಿ ಉಕ್ರೇನ್ ಮತ್ತು ಅಲ್ಲಿನ ಜನರನ್ನು ನೆರವಾಗಲು ವಿಶ್ವಬ್ಯಾಂಕ್ ತ್ವರಿತ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸದ್ಯ ಬಿಕ್ಕಟ್ಟಿನಲ್ಲಿ ಮಾನವ ಮತ್ತು ಆರ್ಥಿಕ ಪರಿಣಾಮಗಳನ್ನು ಪರಿಹರಿಸಲು ವಿಶ್ವಬ್ಯಾಂಕ್ ತೆಗೆದುಕೊಳ್ಳುತ್ತಿರುವ ಹಲವು ಕ್ರಮಗಳಲ್ಲಿ ಇದು ಮೊದಲನೆಯದಾಗಿದೆ ಎಂದು ಅಧ್ಯಕ್ಷ ಡೇವಿಡ್ ಮಾಲ್ಪಾಸ್ ಹೇಳಿದ್ದಾರೆ.
ಅಲ್ಲದೇ, ಮುಂಬರುವ ದಿನಗಳಲ್ಲಿ ಉಕ್ರೇನ್‌ಗೆ 3 ಬಿಲಿಯನ್ ಡಾಲರ್ ಪ್ಯಾಕೇಜ್ ಸಹ ಸಿದ್ಧಪಡಿಸಲಾಗುತ್ತಿದೆ. ಉಕ್ರೇನ್ ನಿರಾಶ್ರಿತರಿಗೆ ನೆರೆಯ ರಾಷ್ಟ್ರಗಳು ನೆರವಿಗೆ ಬರುತ್ತಿವೆ. ಇದುವರೆಗೆ ಉಕ್ರೇನ್ನಿಂದ ಮಹಿಳೆಯರು, ಮಕ್ಕಳು ಮತ್ತು ಹಿರಿಯರು ಸೇರಿ 1.7 ಮಿಲಿಯನ್ ಸ್ಥಳಾಂತರವಾಗಿರುವ ಮಾಹಿತಿ ಲಭ್ಯವಾಗಿದೆ ಎಂದು ವಿಶ್ವಬ್ಯಾಂಕ್ ಅಧ್ಯಕ್ಷರು ವಿವರಿಸಿದ್ದಾರೆ.
ಇದನ್ನೂ ಓದಿ: ನಾನು ಕೀವ್ನಲ್ಲಿಯೇ ಇದ್ದೇನೆ, ಅವಿತುಕೊಂಡಿಲ್ಲ: ಮತ್ತೆ ಸ್ಪಷ್ಟಪಡಿಸಿದ ಉಕ್ರೇನ್ ಅಧ್ಯಕ್ಷ