ಜಿನೀವಾ: ಕೊರೊನಾ ಬಿಕ್ಕಟ್ಟಿನ ಆರಂಭಿಕ ಹಂತಗಳಲ್ಲಿ 'ವೈರಲ್ ನ್ಯುಮೋನಿಯಾ' ಪ್ರಕರಣಗಳ ಕುರಿತು ಚೀನಾದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ದೇಶೀಯ ಕಚೇರಿಯು ವುಹಾನ್ ಮುನ್ಸಿಪಲ್ ಹೆಲ್ತ್ ಕಮಿಷನ್‌ನಿಂದ ಮಾಹಿತಿ ಪಡೆದುಕೊಂಡಿತ್ತಂತೆ.
ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಮಾರಕ ರೋಗದ ಬಗ್ಗೆ ತಿಳುವಳಿಕೆಯನ್ನು ಹೆಚ್ಚಿಸುವ ಕೆಲಸ ಮಾಡಲು ಅಂತಾರಾಷ್ಟ್ರೀಯ ತಜ್ಞರ ತಂಡವನ್ನು ಕಳುಹಿಸುವ ಒಪ್ಪಂದದ ಕುರಿತು ಕಳೆದ ಜನವರಿ ತಿಂಗಳಲ್ಲೇ ಚೀನಾ ಜೊತೆಗೆ ಮಾತನಾಡಿದ್ದರು.
ಕಳೆದ ವರ್ಷ ಡಿಸೆಂಬರ್ 31 ರಂದು ಚೀನಾದಲ್ಲಿನ WHO ಕಚೇರಿಯು, ವೈರಲ್ ನ್ಯುಮೋನಿಯಾ ಕುರಿತ ಮಾಹಿತಿ ಪಡೆದ ಮರುದಿನವೇ ವುಹಾನ್‌ನಲ್ಲಿ ವರದಿಯಾದ ವೈವಿಧ್ಯಮಯ ನ್ಯುಮೋನಿಯಾ ಪ್ರಕರಣಗಳ ಮಾಹಿತಿಯನ್ನು ಚೀನಾ ಅಧಿಕಾರಿಗಳಿಂದ ಕೇಳಿತ್ತು.
ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿರುವ ಕೊರೊನಾ ವೈರಸ್ನಿಂದಾಗಿ ಈ ಮಾರಕ ರೋಗ ಸ್ಫೋಟಗೊಂಡಿದೆ ಎಂದು ಚೀನಾ ಅಧಿಕಾರಿಗಳು ತಿಳಿಸಿರುವ ಬಗ್ಗೆ ಜನವರಿ 9 ರಂದು ಡಬ್ಲ್ಯುಎಚ್‌ಒ ವರದಿ ಮಾಡಿದೆ. ಹೊಸದಾಗಿ ಉದ್ಭವಿಸಿರುವ ಕೊರೊನಾ ವೈರಸ್ನಿಂದ ಉಂಟಾಗುವ ರೋಗವನ್ನು COVID-19 ಎಂದು ಹೆಸರಿಸಲಾಗುವುದು ಎಂದು ಆರೋಗ್ಯ ಸಂಸ್ಥೆ ಫೆಬ್ರವರಿ 11 ರಂದೇ ಹೇಳಿದೆ. ಹೊಸ ವೈರಸ್ ಹರಡುತ್ತಿರುವ ಬಗ್ಗೆ ಮಾಹಿತಿ ಹಾಗೂ ಎಚ್ಚರಿಕೆ ನೀಡದೆ ಚೀನಾ ವಿಳಂಬ ಮಾಡಿದೆ. WHO ಈ ಬಗ್ಗೆ ಎಚ್ಚರಿಸುವ ಮುನ್ನವೇ ಚೀನಾ ಆ ಕೆಲಸ ಮಾಡಿದ್ದರೆ, ಆರಂಭಿಕ ದಿನಗಳಲ್ಲೇ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಪ್ರಯತ್ನಿಸಬಹುದಿತ್ತು ಎಂಬ ಮಾತುಗಳು ಜಾಗತಿಕ ಮಟ್ಟದಲ್ಲಿ ಕೇಳಿಬಂದಿತ್ತು.
ಮುಂದಿನ ವಾರ ಚೀನಾಗೆ ತೆರಳಲಿದೆ WHO ತಜ್ಞರ ತಂಡ:
ಕೊರೊನಾ ವೈರಸ್ ಏಕಾಏಕಿ ಹಬ್ಬಿದ ಬಗ್ಗೆ ಚೀನಾ ಮಾಹಿತಿ ನೀಡುವುದರಲ್ಲಿ ವಿಳಂಬ ಧೋರಣೆ ಅನುಸರಿಸಿದೆ ಎಂಬ ಹಲವು ತಿಂಗಳುಗಳ ಜಾಗತಿಕ ಅಪವಾದದ ಮಧ್ಯೆ, WHO ತಂಡವು ಮುಂದಿನ ವಾರ ಚೀನಾಗೆ ಭೇಟಿ ನೀಡಿ ವೈರಸ್‌ನ ಹುಟ್ಟು ಮತ್ತು ಅದು ಮಾನವರಿಗೆ ಹರಡಿದ ಬಗೆಯ ಬಗ್ಗೆ ತನಿಖೆ ನಡೆಸಲಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್, ವೈರಸ್‌ನ ಉಗಮದ ಬಗ್ಗೆ ಸಮಗ್ರ ತನಿಖೆ ನಡೆಸಬೇಕಾಗಿದೆ. ವೈರಸ್ ಮೂಲದ ಬಗ್ಗೆ ತನಿಖೆ ನಡೆಸಲು ನಮ್ಮ ತಜ್ಞರ ತಂಡ ಮುಂದಿನ ವಾರ ಚೀನಾಗೆ ಹೋಗಲಿದೆ. ಈ ಭೇಟಿ ಬಗ್ಗೆ WHO ಚೀನಾ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತಿದೆ ಎಂದು ಸ್ವಾಮಿನಾಥನ್ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ವುಹಾನ್‌ನಲ್ಲಿ ನ್ಯುಮೋನಿಯಾ ಪ್ರಕರಣಗಳ ವರದಿಯಾಗಿರುವ ಬಗ್ಗೆ ಕಳೆದ ಡಿಸೆಂಬರ್ 31 ರಂದು ಚೀನಾ ಸರ್ಕಾರವು ತಿಳಿಸಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಚೀನಾದಲ್ಲಿರುವ ನಮ್ಮ WHO ದೇಶೀಯ ಕಚೇರಿ, ಜನವರಿ 1 ರಂದು ತನ್ನ ಅಂತಾರಾಷ್ಟ್ರೀಯ ಕಾರ್ಯವಿಧಾನಗಳನ್ನು ಸಕ್ರಿಯಗೊಳಿಸಿದೆ. ಯಾವುದೇ ಹೊಸ ರೋಗಗಳು ವರದಿಯಾದಂತೆಲ್ಲಾ ಈ ರೀತಿ ಮಾಡಲಾಗುತ್ತದೆ. ಇದನ್ನು ಎಲ್ಲರಿಗೂ ಬಲುಬೇಗನೆ ತಲುಪಿಸಲಾಗುತ್ತದೆ. ಇದರಿಂದ ಇಡೀ ಜಗತ್ತಿಗೆ ಅದರ ಬಗ್ಗೆ ತಿಳಿಯುತ್ತದೆ ಎಂದು ಡಾ. ಸ್ವಾಮಿನಾಥನ್ ಹೇಳಿದ್ದಾರೆ.
ಕೋವಿಡ್ ಉಂಟುಮಾಡುವ ವೈರಸ್, ಬಾವಲಿ ವೈರಸ್‌ಗಳಿಗೆ ಹೋಲುತ್ತದೆ ಎಂದು ಅದರ ಅನುಕ್ರಮಗಳು ತೋರಿಸುತ್ತವೆ ಎಂದು ಸ್ವಾಮಿನಾಥನ್ ಹೇಳಿದ್ದಾರೆ. ಅದು ಎಲ್ಲಿ ಮತ್ತು ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಹೆಚ್ಚು ನಾವು ತಿಳಿದಿಲ್ಲ. ಇದು ಬಾವಲಿ ವೈರಸ್‌ಗಳಿಗೆ ಹೋಲುತ್ತದೆ ಎಂದು ವೈರಸ್ ಅನುಕ್ರಮಗಳಿಂದ ನಮಗೆ ತಿಳಿದಿದೆ. ಬಾವಲಿಗಳಲ್ಲಿ ಸಾಕಷ್ಟು ಕೊರೊನಾ ವೈರಸ್‌ಗಳು ಇವೆ ಎಂದು ತೋರಿಸಲು ಆಗ್ನೇಯ ಏಷ್ಯಾದಲ್ಲಿ ಸಾಕಷ್ಟು ಅಧ್ಯಯನಗಳು ನಡೆದಿವೆ. 500ಕ್ಕೂ ಹೆಚ್ಚು ಬಗೆಯ ಕೊರೊನಾ ವೈರಸ್‌ಗಳಿವೆ ಎಂದು ಅವರು ಹೇಳಿದ್ದಾರೆ.