ಜಿನೀವಾ (ಸ್ವಿಟ್ಜರ್ಲ್ಯಾಂಡ್): ಕೊರೊನಾ ವೈರಸ್ ವಿರುದ್ಧ ಹೋರಾಡಲು ದೇಶಾದ್ಯಂತ ಪೋಲಿಯೊ ಕಣ್ಗಾವಲು ಜಾಲವನ್ನು ವ್ಯವಸ್ಥಿತವಾಗಿ ಬಳಸಿಕೊಳ್ಳುವುದರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯೊಂದಿಗಿನ ಭಾರತದ ಸಹಯೋಗವನ್ನು ಡಬ್ಲ್ಯುಎಚ್‌ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶ್ಲಾಘಿಸಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ರಾಷ್ಟ್ರೀಯ ಪೋಲಿಯೊ ಕಣ್ಗಾವಲು ಜಾಲ ಮತ್ತು ಇತರ ಕ್ಷೇತ್ರದ ಸಿಬ್ಬಂದಿಯನ್ನು ವ್ಯವಸ್ಥಿತವಾಗಿ ಕೊವಿಡ್-19ಗೆ ಬಳಸಿಕೊಳ್ಳಲು ಭಾರತ ಪ್ರಾರಂಭಿಸಿದೆ ಎಂದು ಘೆಬ್ರೆಯೆಸಸ್ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಜಾಗತಿಕ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಯುಎನ್ ಸಂಘಟನೆಯೊಂದಿಗೆ ಸೇರಿದ್ದಕ್ಕೆ ಡಬ್ಲ್ಯುಎಚ್‌ಒ ಮುಖ್ಯಸ್ಥ ಭಾರತದ ಆರೋಗ್ಯ ಸಚಿವ ಹರ್ಷವರ್ಧನ್ ಅವರಿಗೆ ಧನ್ಯವಾದ ಅರ್ಪಿಸಿದರು. ನಮ್ಮ ಜಂಟಿ ಪ್ರಯತ್ನದ ಮೂಲಕ ಕೊರೊನಾ ವೈರಸನ್ನು ಸೋಲಿಸಿ ಅನೇಕ ಜೀವಗಳನ್ನು ಉಳಿಸಬಹುದು ಎಂದು ಹೇಳಿದರು.
ಭಾರತ ಸರ್ಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಜೊತೆಯಾಗಿ ದೇಶದಲ್ಲಿ ಪೋಲಿಯೋ ತೊಡೆದುಹಾಕಿದಂತೆ, ಕೊರೊನಾ ವೈರಸನ್ನು ಕೂಡಾ ನಾಶಪಡಿಸಬೇಕಾಗಿದೆ ಎಂದು ಹರ್ಷವರ್ಧನ್ ಹೇಳಿದ್ದಾರೆ.