ಹೈದರಾಬಾದ್: ಕೊರೊನಾ ವೈರಸ್ನ ಸಂಕಷ್ಟದಿಂದ ತೀವ್ರವಾಗಿ ಬಳಲುತ್ತಿರುವ ರಾಷ್ಟ್ರಗಳ ಸಹಾಯಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಮತ್ತು ಯುರೋಪಿಯನ್ ಇನ್ವೆಸ್ಟಮೆಂಟ್ ಬ್ಯಾಂಕ್ (ಇಐಬಿ) ಕೈಜೋಡಿಸಿವೆ. ಇಐಬಿ ವಿಶ್ವದ ಅತಿದೊಡ್ಡ ಸಾರ್ವಜನಿಕ ಬ್ಯಾಂಕ್ ಆಗಿರುವುದು ಗಮನಾರ್ಹ.
ಕೋವಿಡ್ ಪರಿಣಾಮದಿಂದ ಆಫ್ರಿಕಾ ದೇಶಗಳಲ್ಲಿ ಉದ್ಭವಿಸಿರುವ ಆರೋಗ್ಯ, ಸಾಮಾಜಿಕ ಮತ್ತು ಆರ್ಥಿಕ ಬಿಕ್ಕಟ್ಟುಗಳ ನಿವಾರಣೆಗೆ ಇಐಬಿ 1.4 ಬಿಲಿಯನ್ ಯುರೋ ಹಣಕಾಸು ಸಹಾಯ ನೀಡಲಿದೆ. ವಿಶ್ವಸಂಸ್ಥೆಯ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಅನುಭವ ಹಾಗೂ ಹಣಕಾಸು ಕ್ಷೇತ್ರದ ದೈತ್ಯ ಇಐಬಿಗಳ ಪಾಲುದಾರಿಕೆಯಿಂದ ಕೋವಿಡ್-19 ಹೋರಾಟಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ. ಟೆಡ್ರೋಸ್ ಅಧನೋಮ್ ಘೆಬ್ರೆಯಸುಸ್ ಹೇಳಿದ್ದಾರೆ.
ವ್ಯಾಕ್ಸಿನ್ ಅಭಿವೃದ್ಧಿ, ರೋಗ ಪತ್ತೆ ವಿಧಾನ ಮತ್ತು ಚಿಕಿತ್ಸೆಗಳಿಗೆ ಸಂಬಂಧಿಸಿದ ಸುಮಾರು 20 ಯೋಜನೆಗಳಿಗೆ ಇಐಬಿ ಸಹಯೋಗ ನೀಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಯುರೋಪಿಯನ್ ಬ್ಯಾಂಕ್ ಆರೋಗ್ಯ ಕ್ಷೇತ್ರಕ್ಕಾಗಿ ಪ್ರತಿವರ್ಷ 2 ಬಿಲಿಯನ್ ಯುರೋ ನೆರವು ನೀಡುತ್ತಿದೆ.