ಕೀವ್: ರಷ್ಯಾ ಮೇಲೆ ನಿರ್ಬಂಧಗಳನ್ನು ಹೇರಿ ಉಕ್ರೇನ್‌ಗೆ ನೆರವು ನೀಡುತ್ತಿರುವ ಅಮೆರಿಕ ಇದೀಗ ಮತ್ತೊಂದು ಮೆಚ್ಚುಗೆಯ ಕಾರ್ಯವನ್ನು ಮಾಡಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಲ್ವರು ಉಕ್ರೇನ್ ಮಕ್ಕಳು ಮತ್ತವರ ಕುಟುಂಬಗಳನ್ನು ಅಮೆರಿಕದ ಆಸ್ಪತ್ರೆಯೊಂದಕ್ಕೆ ಆಹ್ವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಗಳವಾರ ಟೆನ್ನೆಸ್ಸೀಯ ಮೆಂಫಿಸ್‌ನಲ್ಲಿರುವ ಸೇಂಟ್ ಜೂಡ್ ಚಿಲ್ಡ್ರನ್ಸ್ ರಿಸರ್ಚ್ ಆಸ್ಪತ್ರೆಗೆ ಈ ನಾಲ್ವರು ಮಕ್ಕಳು ಆಗಮಿಸಿದ್ದು, ಉಕ್ರೇನ್‌ನಿಂದ ರೋಗಿಗಳನ್ನು ಸ್ವೀಕರಿಸಿದ ಅಮೆರಿಕದ ಮೊದಲ ಆಸ್ಪತ್ರೆಯಾಗಿದೆ ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಸೇಂಟ್ ಜೂಡ್ ಪ್ರಕಾರ, ಕುಟುಂಬಗಳು ಪೋಲೆಂಡ್‌ನ ಕ್ರಾಕೋವ್‌ನಿಂದ ಯುಎಸ್ ಸರ್ಕಾರದ ವೈದ್ಯಕೀಯ ಸಾರಿಗೆ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. ಮಕ್ಕಳು ತಮ್ಮ ದೇಶದ ಧ್ವಜವನ್ನು ಹಿಡಿದು ಖುಷಿಯಿಂದ ಹೋಗುತ್ತಿರುವ ಫೋಟೋಗಳು ಸಖತ್ ವೈರಲ್ ಆಗಿವೆ.
ತೀವ್ರ ಕಾಯಿಲೆಗಳಿರುವ ಮಕ್ಕಳಿಗೆ ನಮ್ಮ ನೆರವಿನ ಹಸ್ತ ಪ್ರಪಂಚದಾದ್ಯಂತ ವಿಸ್ತರಿಸಿದೆ. ಈ ಕುಟುಂಬಗಳು ತಮ್ಮ ಮಕ್ಕಳ ಚಿಕಿತ್ಸೆ ಮುಂದುವರಿಸಲು ಸುರಕ್ಷಿತ ಸ್ಥಳಗಳಿಗೆ ತೆರಳಲು ಸಹಾಯ ಮಾಡ್ತೇವೆ ಎಂದು ಸೇಂಟ್ ಜೂಡ್ ಅಧ್ಯಕ್ಷ ಮತ್ತು ಸಿಇಒ ಜೇಮ್ಸ್ ಆರ್. ಡೌನಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕ್ಯಾನ್ಸರ್‌ನಿಂದ ಬಳಲುತ್ತಿರುವ 400 ಕ್ಕೂ ಹೆಚ್ಚು ಉಕ್ರೇನ್ ಮಕ್ಕಳನ್ನು ಪೋಲೆಂಡ್‌ನ ಕ್ಲಿನಿಕ್‌ಗೆ ಸ್ಥಳಾಂತರಿಸಲಾಗಿದೆ. 28 ದೇಶಗಳ ಸುಮಾರು 200 ಆಸ್ಪತ್ರೆಗಳ ಪೈಕಿ ಒಂದರಲ್ಲಿ ಇವರನ್ನು ಇರಿಸಿ ಚಿಕಿತ್ಸೆ ನೀಡಲು ವೈದ್ಯರು ವೇಗವಾಗಿ ಕೆಲಸ ಮಾಡುತ್ತಿದ್ದಾರೆ.
ಫೆಬ್ರವರಿ 24 ರಂದು ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ನಂತರ ತಕ್ಷಣವೇ ಏರ್‌ಲಿಫ್ಟ್ ಕೆಲಸ ಪ್ರಾರಂಭವಾಯಿತು. ಸೇಂಟ್ ಜೂಡ್, ಪೋಲಿಷ್ ಸೊಸೈಟಿ ಆಫ್ ಪೀಡಿಯಾಟ್ರಿಕ್ ಆಂಕೊಲಾಜಿ ಮತ್ತು ಹೆಮಟಾಲಜಿ, ಪೋಲೆಂಡ್‌ನ ಫಂಡಾಕ್ಜಾ ಹೆರೋಸಿ (ಹೀರೋಸ್ ಫೌಂಡೇಶನ್) ಮತ್ತು ಉಕ್ರೇನಿಯನ್ ದತ್ತಿ ಸಂಸ್ಥೆಯಾದ ಟ್ಯಾಬ್ಲೆಟ್‌ಚ್ಕಿ ಜಂಟಿಯಾಗಿ ಮಕ್ಕಳನ್ನು ರೋಗಗಳಿಂದ ರಕ್ಷಿಸುವ ಪ್ರಯತ್ನ ಮಾಡುತ್ತಿದೆ.
ಇದನ್ನೂ ಓದಿ: ರಷ್ಯಾದೊಂದಿಗೆ ಶಾಂತಿ ಮಾತುಕತೆ; ಒಪ್ಪಿಗೆಯಾಗುವ ಒಪ್ಪಂದಕ್ಕೆ ಉಕ್ರೇನ್ ಜನಾಭಿಪ್ರಾಯ ಸಂಗ್ರಹ - ಝೆಲೆನ್‌ಸ್ಕಿ