ಪೋಲ್ಯಾಂಡ್ : ಉಕ್ರೇನ್ ಮೇಲೆ ರಷ್ಯಾದ ಆಕ್ರಮಣದ ಭೀತಿಯ ನಡುವೆ ಸೈನಿಕರನ್ನು ನಿಯೋಜಿಸಲು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಆದೇಶ ಹೊರಡಿಸಿದ್ದರು. ಈ ಹಿನ್ನೆಲೆಯಲ್ಲಿ 1,700 ಸೈನಿಕರನ್ನು ಒಳಗೊಂಡ ಯುಎಸ್ ಪಡೆಗಳು ಉಕ್ರೇನ್ ಗಡಿಯ ಸಮೀಪವಿರುವ ಆಗ್ನೇಯ ಪೋಲೆಂಡ್‌ಗೆ ಬಂದಿಳಿದವು.
82ನೇ ವಾಯುಗಾಮಿ ವಿಭಾಗದ ವಾಯುಗಾಮಿ ಪದಾತಿ ಪಡೆಗಳು ಯುಎಸ್ ಆರ್ಮಿ ಬೋಯಿಂಗ್ C-17 ಗ್ಲೋಬ್‌ಮಾಸ್ಟರ್ ವಿಮಾನದಲ್ಲಿ ರ್ಜೆಸ್ಜೋವ್-ಜಸಿಯೊಂಕಾ ವಿಮಾನ ನಿಲ್ದಾಣಕ್ಕೆ ಆಗಮಿಸಿದವು. ಸೇನೆಯ ಕಮಾಂಡರ್ ಮೇಜರ್ ಜನರಲ್ ಕ್ರಿಸ್ಟೋಫರ್ ಡೊನಾಹು, ಆಗಸ್ಟ್ 30 ರಂದು ಆಫ್ಘಾನಿಸ್ತಾನವನ್ನು ತೊರೆದಿದ್ದರು.
ರಷ್ಯಾ ಮತ್ತು ಉಕ್ರೇನ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ ನ್ಯಾಟೋ ಪೂರ್ವ ಪಾರ್ಶ್ವಕ್ಕೆ ಅಮೆರಿಕದ ಬದ್ಧತೆಯನ್ನು ಮಿತ್ರರಾಷ್ಟ್ರಗಳು ಮತ್ತು ಶತ್ರುಗಳಿಗೆ ಪ್ರದರ್ಶಿಸಲು ಪೋಲೆಂಡ್, ರೊಮೇನಿಯಾ ಮತ್ತು ಜರ್ಮನಿಗೆ ಹೆಚ್ಚುವರಿ ಯುಎಸ್ ಪಡೆಗಳನ್ನು ನಿಯೋಜಿಸಲು ಬೈಡನ್ ಆದೇಶಿಸಿದರು. ನ್ಯಾಟೋ ಪೂರ್ವ ಸದಸ್ಯ ಪೋಲೆಂಡ್ ರಷ್ಯಾ ಮತ್ತು ಉಕ್ರೇನ್ ಎರಡಕ್ಕೂ ಗಡಿಯಾಗಿದೆ. ರೊಮೇನಿಯಾ ಉಕ್ರೇನ್ ಗಡಿಯಾಗಿದೆ.
ಉಕ್ರೇನ್ ಸುತ್ತಲೂ ರಷ್ಯಾ ತನ್ನ ಸೈನಿಕರನ್ನು ನಿಯೋಜಿಸಿದೆ. ಅವರ ಚಲನವಲನವು ಅಸಹಜ ಎಂದು ಅಮೆರಿಕ ಮತ್ತು ನ್ಯಾಟೋ ಹೇಳಿವೆ. ಜೋ ಬೈಡನ್ ಮತ್ತು ಯುರೋಪಿಯನ್ ನಾಯಕರ ಎಚ್ಚರಿಕೆಯ ನಡುವೆಯೂ ಪುಟಿನ್ ತಮ್ಮ 1 ಲಕ್ಷ ರಷ್ಯಾ ಪಡೆಗಳನ್ನು ಉಕ್ರೇನ್ ಗಡಿಯಲ್ಲಿ ನಿಯೋಜಿಸಿದ್ದಾರೆ. ಶೀಘ್ರದಲ್ಲಿಯೇ ಅದು ಉಕ್ರೇನ್‌ನಲ್ಲಿ ತನ್ನ ಸೇನಾ ಕಾರ್ಯಾಚರಣೆಗಳನ್ನು ನಡೆಸುವ ಸಾಧ್ಯತೆ ಇದೆ.
ಉಕ್ರೇನ್ ಅಥವಾ ನ್ಯಾಟೋ ದೇಶಗಳ ಗಡಿಯಲ್ಲಿ ರಷ್ಯಾ ತನ್ನ ಸೇನಾ ಜಮಾವಣೆಯನ್ನು ಹೆಚ್ಚಿಸಿದರೆ, ಉಕ್ರೇನ್‌ನಲ್ಲಿನ ಸಂಘರ್ಷದ ಅಪಾಯ ಮತ್ತಷ್ಟು ಭುಗಿಲೇಳುವುದು ಖಚಿತ. ಇದು ಯುದ್ಧಕ್ಕೆ ಎಡೆ ಮಾಡಿಕೊಡಲಿದೆ. ರಷ್ಯಾ ಹಾಗೂ ಅಮೆರಿಕ ನಡುವಿನ ಶೀತಲ ಸಮರಕ್ಕೆ ಈ ದಾಳಿ ತುಪ್ಪ ಸುರಿಯಲಿದೆ. ಇತರೆ ಯುರೋಪ್ ದೇಶಗಳೊಂದಿಗಿನ ರಷ್ಯಾದ ಸಂಬಂಧ ಹಳಸಿದೆ.
ಇದನ್ನೂ ಓದಿ: Pm Security Breach: ಘಟನಾ ಸ್ಥಳಕ್ಕೆ ಭೇಟಿ ನೀಡಿದ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿ