ವಿಶ್ವಸಂಸ್ಥೆ: ಕೊರೊನಾ ವೈರಸ್ ಲಸಿಕೆ ಪ್ರಯೋಗಗಳ ಫಲಿತಾಂಶಗಳು ಸಕಾರಾತ್ಮಕವಾಗಿದ್ದು, 'ಜಗತ್ತು ಸಾಂಕ್ರಾಮಿಕ ರೋಗದ ಅಂತ್ಯದ ದಿನಗಳ ಕನಸು ಕಾಣಬಹುದು' ಎಂದು ಯುಎನ್ ಆರೋಗ್ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಶುಕ್ರವಾರ ಭರವಸೆ ನೀಡಿದ್ದಾರೆ.
ಕೊರೊನಾ ಸಾಂಕ್ರಾಮಿಕವು ದಾಳಿಯಿಟ್ಟು ಜನರಲ್ಲಿ ಒಂದೆಡೆ ಸಹಾನುಭೂತಿ, ತ್ಯಾಗದ ಸ್ಪೂರ್ತಿದಾಯಕ ಕಾರ್ಯಗಳನ್ನು ಮತ್ತು ವಿಜ್ಞಾನ ಮತ್ತು ನಾವೀನ್ಯತೆಯ ಅದ್ಭುತ ಸಾಹಸಗಳನ್ನ ಮಾಡಲು ಪ್ರೇರೇಪಣೆ ಮಾಡಿದೆ. ಅಷ್ಟೇ ಅಲ್ಲ ಮಾನವೀಯತೆಯನ್ನು ಕಲಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಹೆಲ್ಮೆಟ್ ಧರಿಸಿದ್ರೆ ಮಾತ್ರ ಪೆಟ್ರೋಲ್ .. ಕೊಲ್ಕತ್ತಾದಲ್ಲಿ ವಿನೂತನ ನಿಯಮ ಜಾರಿ
ಇನ್ನು ಪ್ರಸ್ತುತ ಕೊರೊನಾದಿಂದಾಗಿ ಹೆಚ್ಚು ಸಾವು ನೋವುಗಳನ್ನ ಅನುಭವಿಸುತ್ತಿರುವ ದೇಶವೊಂದನ್ನು ಉದ್ದೇಶಿಸಿ ಮಾತನಾಡಿದ ಅವರು, ಆ ರಾಷ್ಟ್ರದ ಹೆಸರು ಉಲ್ಲೇಖಿಸದೆಯೇ ಟಾಂಗ್ ನೀಡಿದ್ದಾರೆ. ವಿಭಜನೆಯಿಂದ ಒಗ್ಗಟ್ಟನ್ನು ದುರ್ಬಲಗೊಳಿಸುತ್ತಿರುವ, ತ್ಯಾಗವನ್ನು ಸ್ವ-ಆಸಕ್ತಿಯೊಂದಿಗೆ ಬದಲಿಸುತ್ತಿರುವ ದೇಶಗಳಲ್ಲಿ ವಿಜ್ಞಾನವು ಮುಳುಗಿಹೋಗುತ್ತದೆ. ಅಲ್ಲಿ ವೈರಸ್ ಹರಡಿ ಸಾವು -ನೋವುಗಳು ಇನ್ನಷ್ಟು ಏರುತ್ತಿವೆ ಎನ್ನುವ ಮೂಲಕ ಅಮೆರಿಕ ಹೆಸರಿಸದೇ ಟಾಂಗ್ ಕೊಟ್ಟಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ವಾಗ್ದಾಳಿ ನಡೆಸಿದ್ದರಲ್ಲದೇ, ಅನುದಾನ ನಿಲ್ಲಿಸುವ ಎಚ್ಚರಿಕೆ ನೀಡಿದ್ದರು. ಹೀಗಾಗಿ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಈ ರೀತಿಯ ಟಾಂಗ್ ನೀಡಿದ್ದಾರೆ.
ಲಸಿಕೆಯಿಂದ ಸಾಂಕ್ರಾಮಿಕ ರೋಗವು ಕೊನೆಗೊಳ್ಳುವುದೇ ಹೊರತು ಈಗಿರುವ ಬಡತನ, ಹಸಿವು, ಅಸಮಾನತೆ ಮತ್ತು ಹವಾಮಾನ ಬದಲಾವಣೆಯನ್ನು ಅದು ನಿವಾರಿಸುವುದಿಲ್ಲ. ಅದನ್ನು ನಾವುಗಳೇ ನಿಭಾಯಿಸಬೇಕು ಎಂದ ಅವರು ಉನ್ನತ ಮಟ್ಟದ ಸಭೆಯ ವಾಸ್ತವ ಭಾಷಣದಲ್ಲಿ ಎಚ್ಚರಿಸಿದರು.
"ನಾವು ಆರೋಗ್ಯದೆಡೆಗಿನ ನಿಲುವು ಪುನರ್ವಿಮರ್ಶೆ ಮಾಡಿಕೊಳ್ಳಬೇಕು. ಜಗತ್ತು ಬಿಕ್ಕಟ್ಟನ್ನು ತಪ್ಪಿಸಬೇಕಾದರೆ ಸಾರ್ವಜನಿಕ ಆರೋಗ್ಯ ಕಾರ್ಯಗಳಿಗೆ, ವಿಶೇಷವಾಗಿ ಪ್ರಾಥಮಿಕ ಆರೋಗ್ಯ ರಕ್ಷಣೆಯಲ್ಲಿನ ಹೂಡಿಕೆಗಳು ಹೆಚ್ಚಾಗಬೇಕು ಎಂದು ಟೆಡ್ರೊಸ್ ಹೇಳಿದರು.