ಕೀವ್(ಉಕ್ರೇನ್): ಉಕ್ರೇನ್ನಲ್ಲಿ ರಷ್ಯಾ ಆಕ್ರಮಣ ಮುಂದುವರೆದಿದ್ದು, ಪರಿಸ್ಥಿತಿ ತಣ್ಣಗಾಗುವಂತೆ ಕಾಣುತ್ತಿಲ್ಲ. ಸಾವು ನೋವು ಹೆಚ್ಚುತ್ತಿದ್ದರೂ, ಉಕ್ರೇನಿಯನ್ ಅಪಾರ ಆಸ್ತಿ ಪಾಸ್ತಿ ಹಾನಿಗೊಳಗಾಗುತ್ತಿದ್ದರೂ ರಷ್ಯಾ ಮಾತ್ರ ಯುದ್ಧದಿಂದ ಹಿಂದೆ ಸರಿಯುತ್ತಿಲ್ಲ. ವಿಶ್ವಸಂಸ್ಥೆಯ ಅಂದಾಜಿನ ಮಾಹಿತಿ ಪ್ರಕಾರ, ರಷ್ಯಾ ದಾಳಿಗೆ ಈವರೆಗೆ ಕನಿಷ್ಠ 816 ನಾಗರಿಕರು ಹತರಾಗಿದ್ದು, 1,333 ಜನರು ಗಾಯಗೊಂಡಿದ್ದಾರೆ. ದೊಡ್ಡ ಮಟ್ಟದ ಆಸ್ತಿ ಹಾನಿ ಸಂಭವಿಸಿದೆ.
ರಷ್ಯಾ ಆಕ್ರಮಣದ ನಂತರ ಸ್ಫೋಟಗೊಳ್ಳದ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸಲು ವರ್ಷಗಳು ಬೇಕಾಗುತ್ತದೆ ಎಂದು ಉಕ್ರೇನ್ ಆಂತರಿಕ ಸಚಿವರು ಶುಕ್ರವಾರದಂದು ಹೇಳಿದ್ದಾರೆ. ಮುತ್ತಿಗೆ ಹಾಕಿದ ಉಕ್ರೇನಿಯನ್ ರಾಜಧಾನಿಯಲ್ಲಿ ಅಸೋಸಿಯೇಟೆಡ್ ಪ್ರೆಸ್‌ನೊಂದಿಗೆ ಮಾತನಾಡಿದ ಉಕ್ರೇನ್ ಗೃಹ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ, ಯುದ್ಧ ಮುಗಿದ ನಂತರ ಬೃಹತ್ ಕಾರ್ಯವನ್ನು ನಿಭಾಯಿಸಲು ನಮ್ಮ ದೇಶಕ್ಕೆ ಪಾಶ್ಚಿಮಾತ್ಯ ನೆರವು ಬೇಕಾಗುತ್ತದೆ ಎಂದು ಹೇಳಿದರು.
ರಷ್ಯಾದ ವಾಯುದಾಳಿ ಮೂಲಗಳಾದ ಕ್ಷಿಪಣಿ, ಶೆಲ್, ಬಹು ಉಡಾವಣಾ ರಾಕೆಟ್ಗಳ ದಾಳಿಯಿಂದಾಗಿ ಉಕ್ರೇನ್ನಲ್ಲಿ ಸಾಕಷ್ಟು ಅನಾಹುತಗಳಾಗಿವೆ. ಉಕ್ರೇನ್ ಮೇಲೆ ಹೆಚ್ಚಿನ ಸಂಖ್ಯೆಯ ಬಾಂಬ್ ಸೇರಿದಂತೆ ಶಸ್ತಾಸ್ತ್ರಗಳನ್ನು ಹಾರಿಸಲಾಗಿದೆ. ಆ ಪೈಕಿ ಹೆಚ್ಚಿನ ವು ಇನ್ನೂ ಸ್ಫೋಟಗೊಂಡಿಲ್ಲ. ಅವುಗಳು ಅವಶೇಷಗಳಡಿಯಲ್ಲಿ ಉಳಿದಿವೆ. ಇವು ಮುಂದಿನ ದಿನಗಳಲ್ಲಿ ನಿಜವಾದ ಬೆದರಿಕೆಯನ್ನುಂಟುಮಾಡುತ್ತವೆ. ಅವುಗಳನ್ನು ಶಮನಗೊಳಿಸಲು ತಿಂಗಳುಗಳಲ್ಲ, ವರ್ಷಗಳೇ ಬೇಕಾಗುತ್ತದೆ ಎಂದು ತಿಳಿಸಿದರು.
ಸ್ಫೋಟಿಸದ ರಷ್ಯಾದ ಶಸ್ತ್ರಾಸ್ತ್ರಗಳ ಜೊತೆಗೆ, ಉಕ್ರೇನಿಯನ್ ಪಡೆಗಳು ಸೇತುವೆಗಳು, ವಿಮಾನ ನಿಲ್ದಾಣಗಳು ಮತ್ತು ಇತರ ಕಡೆಗಳಲ್ಲಿ ನೆಲ ಬಾಂಬ್ಗಳನ್ನು ಹುದುಗಿಸಿಟ್ಟಿದ್ದಾರೆ. ಆ ಎಲ್ಲಾ ಪ್ರದೇಶದಿಂದ ಗಣಿಗಳನ್ನು/ಶಸ್ತ್ರಾಸ್ತ್ರಗಳನ್ನು ತೆಗೆದುಹಾಕಲು ನಮಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ನಾನು ನಮ್ಮ ಅಂತರಾಷ್ಟ್ರೀಯ ಪಾಲುದಾರರು, ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕದ ನೆರವು ಕೇಳಿದ್ದೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ರಷ್ಯಾ ಮಿಲಿಟರಿ ದಾಳಿಗೆ ಉಕ್ರೇನ್ನ 816 ಜನರು ಬಲಿ: ವಿಶ್ವಸಂಸ್ಥೆ
ಇನ್ನೂ ರಷ್ಯಾ ಆಕ್ರಮಣ 24ನೇ ದಿನಕ್ಕೆ ಕಾಲಿಟ್ಟಿದೆ. ಶುಕ್ರವಾರದಂದು ರಷ್ಯಾ ಸೇನೆ ಕೀವ್, ಲವಿವ್ ಸೇರಿದಂತೆ ಇತರ ಪ್ರಮುಖ ನಗರಗಳ ಮೇಲೆ ಕ್ಷಿಪಣಿ, ಶೆಲ್ ದಾಳಿ ನಡೆಸಿದೆ. ಉಳಿದಂತೆ ಜನವಸತಿ ಪ್ರದೇಶಗಳು, ಆಸ್ಪತ್ರೆಗಳು ಮತ್ತು ಶಾಲೆಗಳು ಸೇರಿ ಮೂಲಭೂತ ಸೌಕರ್ಯಗಳು ಧ್ವಂಸಗೊಳ್ಳುತ್ತಿವೆ. ಅಂದಾಜು 30 ಲಕ್ಷಕ್ಕೂ ಅಧಿಕ ಮಂದಿ ದೇಶ ಬಿಟ್ಟು ಹೋಗಿದ್ದಾರೆ ಎನ್ನಲಾಗುತ್ತಿದೆ.