ಕೀವ್(ಉಕ್ರೇನ್): ಉಕ್ರೇನ್ ಮೇಲೆ ರಷ್ಯಾ ಯುದ್ಧವನ್ನು ತೀವ್ರಗೊಳಿಸುತ್ತಿದೆ. ಪ್ರಮುಖ ನಗರಗಳನ್ನು ಆಕ್ರಮಿಸಿಕೊಳ್ಳುತ್ತಾ ಸಾಗುತ್ತಿದೆ. ಇದಕ್ಕೆ ತೀವ್ರ ಸ್ವರೂಪದಲ್ಲಿ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಉಕ್ರೇನ್ ಕೂಡಾ ತನ್ನ ನಾಗರಿಕರನ್ನು ಹೋರಾಟಕ್ಕೆ ಪ್ರೋತ್ಸಾಹಿಸುತ್ತಿದೆ.
ಮತ್ತೊಂದೆಡೆ, ಯುದ್ಧದ ಸಂದರ್ಭದಲ್ಲಿ ಸಿಕ್ಕಿಬಿದ್ದಿರುವ, ಪ್ರಾಣ ಕಳೆದುಕೊಂಡಿರುವ ರಷ್ಯಾದ ನೂರಾರು ಸೈನಿಕರ ಮೃತದೇಹಗಳನ್ನು ತೆಗೆದುಕೊಂಡು ಹೋಗುವಂತೆ ರಷ್ಯಾದ ತಾಯಂದಿರಿಗೆ ಉಕ್ರೇನ್ ಮನವಿ ಮಾಡುತ್ತಿದೆ.
ಈ ಕುರಿತಂತೆ ಉಕ್ರೇನ್ ರಕ್ಷಣಾ ಇಲಾಖೆ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದೆ. ಕೀವ್‌ಗೆ ಹೇಗೆ ಬರಬೇಕು ಮತ್ತು ಮೃತರ ವಿವರಗಳನ್ನು ಹೇಗೆ ಪಡೆಯಬೇಕು ಎಂಬುದರ ಸೂಚನೆಗಳನ್ನು ವಿಡಿಯೋದಲ್ಲಿ ತಿಳಿಸಲಾಗಿದೆ.
ಯುದ್ಧ ಆರಂಭವಾಗಿ ಇಂದಿಗೆ ಒಂದು ವಾರ ಕಳೆದಿದೆ. ಈವರೆಗೆ ಸುಮಾರು 6,000 ರಷ್ಯಾದ ಸೈನಿಕರನ್ನು ಕೊಂದಿರುವುದಾಗಿ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದಾರೆ. ಆದರೆ ತನ್ನ ಸೈನಿಕರ ಸಾವನ್ನು ಮೊದಲ ಬಾರಿ ಘೋಷಿಸಿಕೊಂಡಿರುವ ರಷ್ಯಾ, ಉಕ್ರೇನ್ ಮೇಲಿನ ದಾಳಿಯಲ್ಲಿ 498 ಸೈನಿಕರು ಸಾವನ್ನಪ್ಪಿದ್ದಾರೆ, 1,597 ಮಂದಿ ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಮತ್ತೊಂದೆಡೆ, ಉಕ್ರೇನ್‌ನ 2,870ಕ್ಕೂ ಹೆಚ್ಚು ಸೈನಿಕರು ಸಾವಿಗೀಡಾಗಿದ್ದು, 3,700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 572 ಮಂದಿಯನ್ನು ಬಂಧಿಸಲಾಗಿದೆ ಎಂದು ರಷ್ಯಾ ಹೇಳುತ್ತಿದೆ. ಆದರೆ ಉಕ್ರೇನ್ ಸರ್ಕಾರ ಇದನ್ನು ಖಚಿತಪಡಿಸಿಲ್ಲ.
ಇದನ್ನೂ ಓದಿ: ರಷ್ಯಾ ದಾಳಿಯ ನಡುವೆ ಬಾಂಬ್ ಶೆಲ್ಟರ್‌ನಲ್ಲೇ ಹೊಸ ಬದುಕಿಗೆ ಅಡಿಯಿಟ್ಟ ನವಜೋಡಿ