ಲಂಡನ್, ಬ್ರಿಟನ್: ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ವಶಕ್ಕೆ ತೆಗೆದುಕೊಂಡಾಗಿನಿಂದ ಅಲ್ಲಿ ಉಂಟಾಗಿರುವ ಆಂತರಿಕ ಕ್ಷೋಭೆಗೆ ಪರಿಹಾರ ಕಂಡುಕೊಳ್ಳಲು ಬ್ರಿಟನ್ನ ರಾಜತಾಂತ್ರಿಕ ಪ್ರಯತ್ನಗಳು ಮುಂದುವರೆಯುತ್ತಿದ್ದು, ಈ ನಿಟ್ಟಿನಲ್ಲಿ ಅಗತ್ಯವಿದ್ದರೆ ತಾಲಿಬಾನ್ನೊಂದಿಗೆ ಕೆಲಸ ಮಾಡಲು ನಾವು ಸಿದ್ಧ ಎಂದು ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಸ್ಪಷ್ಟನೆ ನೀಡಿದ್ದಾರೆ.
ಕ್ಯಾಬಿನೆಟ್ ಆಫೀಸ್ ಬ್ರೀಫಿಂಗ್ ರೂಮ್ಸ್(COBRA)ನಲ್ಲಿ ತುರ್ತು ಸಭೆ ಕರೆದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಆಫ್ಘನ್ನಲ್ಲಿ ಉಳಿದಿರುವ ಬ್ರಿಟನ್ ಪ್ರಜೆಗಳನ್ನು ಕರೆತರುವುದು ಅಸಾಧಾರಣ ಸವಾಲಾಗಿದ್ದು, ಈಗ ಸದ್ಯದ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಉತ್ತಮವಾಗಿದೆ ಎಂದಿದ್ದಾರೆ.
ಇದರ ಜೊತೆಗೆ ನಾವು ಅಫ್ಘಾನಿಸ್ತಾನದಲ್ಲಿನ ಸಮಸ್ಯೆಯನ್ನು ನಿವಾರಿಸಲು ರಾಜಕೀಯ ಮತ್ತು ರಾಜಕೀಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಅನಿವಾರ್ಯತೆ ಇದ್ದರೆ ತಾಲಿಬಾನ್ನೊಂದಿಗೆ ಕೆಲಸ ಮಾಡಲೂ ನಾವು ಸಿದ್ಧವಿದ್ದೇವೆ. ಅಫ್ಘಾನಿಸ್ತಾನಕ್ಕೆ ನಮ್ಮ ಬದ್ಧತೆ ಶಾಶ್ವತವಾಗಿದ್ದು, ಮುಂದುವರೆಯುತ್ತದೆ ಎಂದಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಈಗ ಪರಿಸ್ಥಿತಿ ಸ್ವಲ್ಪ ಸುಧಾರಿಸುತ್ತಿದೆ. ಇದರಿಂದಾಗಿ ಗುರುವಾರ ನಾವು ಸುಮಾರು 1,000 ಜನರನ್ನು ಮತ್ತು ಶುಕ್ರವಾರ ಇನ್ನೂ 1,000 ಜನರನ್ನು ನಮ್ಮ ದೇಶಕ್ಕೆ ಕರೆತರಲು ಸಾಧ್ಯವಾಯಿತು. ಅಫ್ಘಾನಿಸ್ತಾನ ಪುನರ್ವಸತಿ ಮತ್ತು ನೆರವು ಕಾರ್ಯಕ್ರಮದ (ARAP) ಅಡಿಯಲ್ಲಿ ಸಾಕಷ್ಟು ಮಂದಿಯನ್ನು ಕರೆ ತರಲಾಗುತ್ತಿದೆ. ಅಫ್ಘಾನಿಸ್ತಾನದ ಬ್ರಿಟನ್ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡಿದ್ದ ಆಫ್ಘನ್ ಪ್ರಜೆಗಳನ್ನು ಇಲ್ಲಿಗೆ ಕರೆ ತರಲಾಗುತ್ತದೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಜನರನ್ನು ಬ್ರಿಟನ್‌ಗೆ ಕರೆತರುವ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಈ ಕಾರ್ಯಾಚರಣೆ ಸುಲಭ ಎಂದು ಹೇಳಲು ಸಾಧ್ಯವಿಲ್ಲ ಎಂದಿರುವ ಅವರು ಈವರೆಗೆ 1,615 ಮಂದಿಯನ್ನು ಅಫ್ಘಾನಿಸ್ತಾನದಿಂದ ಬ್ರಿಟನ್‌ಗೆ ಸ್ಥಳಾಂತರಿಸಲಾಗಿದೆ. ಇದರಲ್ಲಿ 399 ಮಂದಿ ಬ್ರಿಟಿಷ್ ಪ್ರಜೆಗಳು, 320 ರಾಯಭಾರ ಸಿಬ್ಬಂದಿ, 402 ಮಂದಿ ಅಫ್ಘಾನಿಸ್ತಾನ್ ಪ್ರಜೆಗಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೊದಲ 'ಫತ್ವಾ'ದಲ್ಲೇ ಬುದ್ಧಿ ತೋರಿಸಿದ ತಾಲಿಬಾನ್.. ವಿಶ್ವವಿದ್ಯಾನಿಲಯಗಳಲ್ಲಿ 'ಸಹ-ಶಿಕ್ಷಣ' ನಿಷೇಧ..