ಲಂಡನ್: ವಿಶ್ವದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಇದೇ ಮೊದಲ ಬಾರಿಗೆ ಬ್ರಿಟನ್‌ನಲ್ಲಿ ಒಂದೇ ದಿನ 50,000 ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಅಧಿಕೃತ ಅಂಕಿ ಅಂಶಗಳು ತಿಳಿಸಿವೆ.
ಅಧಿಕೃತ ಅಂಕಿ ಅಂಶಗಳ ಪ್ರಕಾರ, ಬ್ರಿಟನ್‌ನಲ್ಲಿ ಒಂದೇ ದಿನ 53,135 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, ಇದು ದೇಶದಲ್ಲಿ ದಿನನಿತ್ಯದ ಕೊರೊನಾ ವೈರಸ್ ಪ್ರಕರಣಗಳಲ್ಲಿ ಹೊಸ ದಾಖಲೆಯಾಗಿದೆ. ಬ್ರಿಟನ್‌ನಲ್ಲಿ ಒಟ್ಟು ಕೊರೊನಾ ಪ್ರಕರಣಗಳು 23,82,865 ಕ್ಕೆ ಏರಿಕೆಯಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕಳೆದ 28 ದಿನಗಳಲ್ಲಿ 414 ಸೋಂಕಿತರು ಸಾವನ್ನಪ್ಪಿದ್ದಾರೆ, ಬ್ರಿಟನ್‌ನಲ್ಲಿ ಒಟ್ಟು ಕೊರೊನಾ ವೈರಸ್ ಸಂಬಂಧಿತ ಸಾವುಗಳ ಸಂಖ್ಯೆ 71,567 ಕ್ಕೆ ತಲುಪಿದೆ ಎಂದು ಮಾಹಿತಿ ನೀಡಲಾಗಿದೆ.
ಓದಿ ಭಾರತ-ಬ್ರಿಟನ್ ನಡುವೆ ವಿಮಾನ ಸಂಚಾರ ಬಂದ್
ಹೊಸ ವರ್ಷದಲ್ಲಿ ಸಂಭವಿಸಬಹುದಾದ "ದುರಂತ" ವನ್ನು ತಡೆಗಟ್ಟಲು "ನಿರ್ಣಾಯಕ" ರಾಷ್ಟ್ರೀಯ ಕ್ರಮ ಅಗತ್ಯ ಎಂದು ಬ್ರಿಟಿಷ್ ಸರ್ಕಾರಕ್ಕೆ ವಿಜ್ಞಾನಿಗಳು ಎಚ್ಚರಿಸಿದ್ದು, ಇತ್ತೀಚಿನ ಅಂಕಿ ಅಂಶಗಳು ಆತಂಕಕ್ಕೆ ಕಾರಣವಾಗಿವೆ.
ರೂಪಾಂತರ ಕೊರೊನಾ ವೈರಸ್ ಹರಡುವಿಕೆಯಿಂದಾಗಿ ಬ್ರಿಟನ್ "ಸಾಂಕ್ರಾಮಿಕ ರೋಗದ ಅತ್ಯಂತ ಅಪಾಯಕಾರಿ ಹೊಸ ಹಂತವನ್ನು ಪ್ರವೇಶಿಸುತ್ತಿದೆ." ಎಂದು ನರ್ವಟ್ಯಾಗ್ (Nervtag) ಸದಸ್ಯ ಪ್ರೊ. ಆಂಡ್ರ್ಯೂ ಹೇವರ್ಡ್ ಹೇಳಿದ್ದಾರೆ. "ಜನವರಿ ಮತ್ತು ಫೆಬ್ರವರಿಯಲ್ಲಿ ಸಂಭವಿಸಬಹದಾದ ದುರಂತವನ್ನು ತಡೆಗಟ್ಟಲು ನಮಗೆ ನಿರ್ಣಾಯಕ, ಆರಂಭಿಕ, ರಾಷ್ಟ್ರೀಯ ಕ್ರಮಗಳು ಬೇಕಾಗುತ್ತವೆ." ಎಂದು ಹೇವರ್ಡ್, ರೇಡಿಯೋ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ.