ಲಂಡನ್: ಕಳೆದ 24 ಗಂಟೆಗಳಲ್ಲಿ ಬ್ರಿಟನ್‌ನಲ್ಲಿ 54,990 ಜನರು ಕೋವಿಡ್ -19 ಸೋಂಕಿಗೆ ತುತ್ತಾಗಿದ್ದು, ದೇಶದ ಒಟ್ಟು ಸೋಂಕಿತರ ಸಂಖ್ಯೆ 26,54,779 ಕ್ಕೆ ತಲುಪಿದೆ ಎಂದು ಭಾನುವಾರ ಬಿಡುಗಡೆ ಮಾಡಿದ ಅಧಿಕೃತ ಅಂಕಿ - ಅಂಶಗಳು ತಿಳಿಸಿವೆ.
ಸತತ ಆರನೇ ದಿನ ಬ್ರಿಟನ್‌ನಲ್ಲಿ 50 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಸೋಂಕು ಕಾಣಿಸಿಕೊಂಡ 28 ದಿನಗಳೊಳಗೆ 454 ಮಂದಿ ಸಾವನ್ನಪ್ಪಿದ್ದು, ಕೋವಿಡ್ ಕಾರಣದಿಂದ ಬಲಿಯಾದವರ ಸಂಖ್ಯೆ 75,024 ಕ್ಕೆ ತಲುಪಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.
ಹೆಚ್ಚುತ್ತಿರುವ ಕೊರೊನಾ ವೈರಸ್ ಸೋಂಕು ನಿಗ್ರಹಿಸಲು ಮುಂಬರುವ ವಾರಗಳಲ್ಲಿ ಇಂಗ್ಲೆಂಡ್‌ನಲ್ಲಿ ಪ್ರಾದೇಶಿಕ ನಿರ್ಬಂಧಗಳು "ಕಠಿಣವಾಗಲಿವೆ" ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ. ಹೊಸ ತಳಿಯ ವೈರಸ್ ಹರಡುತ್ತಿರುವುದರಿಂದ ಮುಂದಿನ ದಿನಗಳು ಇನ್ನೂ ಕಠಿಣವಾಗಿರಲಿವೆ ಎಂದು ಬ್ರಿಟಿಷ್ ವೈದ್ಯಕೀಯ ತಜ್ಞರು ಎಚ್ಚರಿಸಿದ್ದಾರೆ.
"ಈ ಹೊಸ ರೂಪಾಂತರ ವೈರಸ್ ಖಂಡಿತವಾಗಿಯೂ ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಇದು ಇಡೀ ದೇಶದಲ್ಲಿ ಹರಡುತ್ತಿದೆ. ಜನರು ಬ್ರಿಟನ್‌ನಲ್ಲಿ ಎಲ್ಲಿ ಹೆಚ್ಚು ಕೆಲಸ ಮಾಡುತ್ತಾರೋ ಅಲ್ಲಿ ನಾವು ಹೆಚ್ಚು ಹೆಚ್ಚು ಪ್ರಕರಣಗಳನ್ನು ನೋಡಲಿದ್ದೇವೆ, ಅದಕ್ಕಾಗಿ ನಾವು ಸಿದ್ಧರಾಗಿರಬೇಕು" ಎಂದು ತೋರುತ್ತದೆ ಎಂದು ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್ ಅಧ್ಯಕ್ಷ ಆಂಡ್ರ್ಯೂ ಗೊಡ್ಡಾರ್ಡ್ ಹೇಳಿದ್ದಾರೆ.
ಲಂಡನ್ ಮತ್ತು ಇಂಗ್ಲೆಂಡ್‌ನ ಇತರ ಅನೇಕ ಭಾಗಗಳು ಈಗಾಗಲೇ ಅತ್ಯುನ್ನತ ನಾಲ್ಕನೇ ಶ್ರೇಣಿಯ ನಿರ್ಬಂಧಗಳಿಗೆ ಒಳಪಟ್ಟಿವೆ, ಈ ಪ್ರದೇಶಗಳಲ್ಲಿ ವಾಸಿಸುವವರು ಸೀಮಿತ ವಿನಾಯಿತಿಗಳೊಂದಿಗೆ ಮನೆಯಲ್ಲಿಯೇ ಇರಬೇಕಾಗುತ್ತದೆ.