ಮಾಸ್ಕೋ(ರಷ್ಯಾ): ಕಳೆದ ಆರು ದಿನಗಳಿಂದ ರಷ್ಯಾ-ಉಕ್ರೇನ್ ಮಧ್ಯೆ ಭೀಕರ ಸಂಘರ್ಷ ನಡೆಯುತ್ತಿದೆ. ಈಗಾಗಲೇ ಸಾವಿರಾರು ಯೋಧರು, ನಾಗರಿಕರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ ಎನ್ನುತ್ತಿವೆ ವರದಿಗಳು. ಇದರ ಜೊತೆಗೆ ಸಾವಿರಾರು ಜನರು ಗಾಯಗೊಂಡಿದ್ದಾರೆ. ಲಕ್ಷಾಂತರ ಜನರು ನಿರಾಶ್ರಿತರಾಗಿ ಉಕ್ರೇನ್ನಿಂದ ನೆರೆ ದೇಶಗಳಿಗೆ ಪಲಾಯನ ಮಾಡಿದ್ದಾರೆ. ಇಷ್ಟೆಲ್ಲದರ ಮಧ್ಯೆ ರಷ್ಯಾ- ಉಕ್ರೇನ್ ನಡುವೆ ನಾಳೆ ಎರಡನೇ ಸುತ್ತಿನ ಕದನ ವಿರಾಮ ಮಾತುಕತೆ ಆಯೋಜನೆಗೊಂಡಿದೆ.
ಉಕ್ರೇನ್ ಉತ್ತರಕ್ಕಿರುವ ನೆರೆದೇಶ ಬೆಲಾರಸ್ನಲ್ಲಿ ಈಗಾಗಲೇ ನಡೆದ ಮೊದಲ ಸುತ್ತಿನ ಕದನ ವಿರಾಮ ಮಾತುಕತೆಯ ವೇಳೆ ಯಾವುದೇ ರೀತಿಯ ಸ್ಪಷ್ಟ ಫಲಿತಾಂಶ ಹೊರಬರಲಿಲ್ಲ. ಹೀಗಾಗಿ ಬುಧವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಯಲಿದೆ ಎಂದು ಸುದ್ದಿಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ: ಹಾವೇರಿಯ ನವೀನ್ ಸಾವಿಗೆ ಉಕ್ರೇನ್ ಸಂತಾಪ; ರಷ್ಯಾ ದಾಳಿ ನಿಲ್ಲಿಸಲು ಮೋದಿಗೆ ಮನವಿ
ಉಕ್ರೇನ್- ರಷ್ಯಾ ವಾದವೇನು?: ಈಗಾಗಲೇ ನಡೆದ ಮೊದಲ ಸುತ್ತಿನ ಮಾತುಕತೆಯ ವೇಳೆ ತನ್ನ ದೇಶದಲ್ಲಿ ಬೀಡುಬಿಟ್ಟಿರುವ ಮಿಲಿಟರಿಯನ್ನು ರಷ್ಯಾ ವಾಪಸ್ ಪಡೆದುಕೊಂಡು ಕದನ ವಿರಾಮ ಘೋಷಣೆ ಮಾಡುವಂತೆ ಉಕ್ರೇನ್ ಹೇಳಿದೆ. ಆದರೆ, ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ರಷ್ಯಾ, ಉಕ್ರೇನ್ ಅಧ್ಯಕ್ಷರನ್ನು ಅಧಿಕಾರದಿಂದ ಕೆಳಗಿಳಿಸಬೇಕು. ಜೊತೆಗೆ, ಮಿಲಿಟರಿ ಸಂಪೂರ್ಣ ಜವಾಬ್ದಾರಿಯನ್ನು ತನ್ನ ಕೈಗೆ ತೆಗೆದುಕೊಳ್ಳುವಂತೆ ತಿಳಿಸುತ್ತಿದೆ. ಈ ವಿಚಾರವಾಗಿ ಉಭಯ ದೇಶಗಳ ಮಧ್ಯೆ ಒಮ್ಮತದ ಅಭಿಪ್ರಾಯ ಮೂಡದ ಕಾರಣ ಸಂಘರ್ಷ ತಾರಕಕ್ಕೇರಿದೆ.
ಭಾನುವಾರ ನಡೆದ ಮಾತುಕತೆಯ ವೇಳೆ ಯಾವುದೇ ರೀತಿಯ ಸ್ಪಷ್ಟ ಫಲಿತಾಂಶ ಹೊರಬರದಿದ್ದರೂ ಉಭಯ ದೇಶಗಳು ಕೆಲವೊಂದು ವಿಷಯಗಳ ಬಗ್ಗೆ ಒಪ್ಪಿಕೊಂಡಿವೆ. ಹೀಗಾಗಿ, ನಾಳೆ ಮತ್ತೊಂದು ಸುತ್ತಿನ ಮಾತುಕತೆಗೆ ವೇದಿಕೆ ಸಿದ್ಧಗೊಂಡಿದೆ. ಮೊದಲ ಸುತ್ತಿನ ಮಾತುಕತೆ ವಿಫಲವಾಗುತ್ತಿದ್ದಂತೆ ಇಂದು ಬೆಳಗ್ಗೆಯಿಂದಲೂ ಉಕ್ರೇನ್ನ ವಿವಿಧ ಪ್ರದೇಶಗಳ ಮೇಲೆ ರಷ್ಯಾ ಮಿಲಿಟರಿ ಪಡೆ ಬಾಂಬ್ ಹಾಗೂ ಶೆಲ್ ದಾಳಿ ನಡೆಸುತ್ತಿದ್ದು, ಅನೇಕ ಪ್ರಮುಖ ಕಟ್ಟಡಗಳು ಧ್ವಂಸಗೊಂಡಿವೆ.
ಇದೇ ವಿಚಾರವಾಗಿ ಯುರೋಪಿಯನ್ ಪಾರ್ಲಿಮೆಂಟ್ನಲ್ಲಿ ಮಾತನಾಡಿರುವ ಉಕ್ರೇನ್ ಅಧ್ಯಕ್ಷರು, ರಷ್ಯಾವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಣೆ ಮಾಡುವಂತೆ ಪಟ್ಟು ಹಿಡಿದರು.