ಲಂಡನ್: ತನ್ನ ದೇಶದ ಗುಪ್ತಚರ ಇಲಾಖೆಯು ಕೊರೊನಾ ವೈರಸ್ ಲಸಿಕೆಯ ಮಾಹಿತಿಯನ್ನು ಕದಿಯಲು ಯತ್ನಿಸಿವೆ ಎಂಬ ಆರೋಪವನ್ನು ಬ್ರಿಟನ್‌ನ ರಷ್ಯಾ ರಾಯಭಾರಿ ತಳ್ಳಿಹಾಕಿದ್ದಾರೆ.
ಅಮೆರಿಕ, ಬ್ರಿಟನ್ ಹಾಗೂ ಕೆನಡಾ ಕಳೆದ ವಾರ ಮಾಡಿದ ಆರೋಪಗಳಲ್ಲಿ ಯಾವುದೇ ಅರ್ಥವಿಲ್ಲ ಎಂದು ರಷ್ಯಾ ರಾಯಭಾರಿ ಆಂಡ್ರೇ ಕೆಲಿನ್ ಭಾನುವಾರ ಬಿಬಿಸಿ ಸಂದರ್ಶನದಲ್ಲಿ ಹೇಳಿದ್ದಾರೆ.
ನಾನು ಈ ಕಥೆಯನ್ನು ನಂಬುವುದಿಲ್ಲ. ಇದರಲ್ಲಿ ಯಾವುದೇ ಅರ್ಥವೂ ಇಲ್ಲ. ನಾನು ಹ್ಯಾಕರ್ಗಳ ಬಗ್ಗೆ ಬ್ರಿಟಿಷ್ ಮಾಧ್ಯಮದಿಂದ ತಿಳಿದುಕೊಂಡಿದ್ದೇನೆ. ಜಗತ್ತಿನ ಯಾವುದೇ ದೇಶಕ್ಕೆ ಬೇರೆ ಬೇರೆ ರೀತಿಯ ಕಂಪ್ಯೂಟರ್ ಹ್ಯಾಕಿಂಗ್ ಬಗ್ಗೆ ಆರೋಪಿಸುವುದು ಅಸಾಧ್ಯ ಎಂದು ಕೆಲಿನ್ ಸಮರ್ಥನೆ ನೀಡಿದ್ದಾರೆ.
ಇನ್ನೊಂದೆಡೆ ಬ್ರಿಟನ್‌ನ ಆಂತರಿಕ ರಾಜಕೀಯ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ನಮ್ಮ ದೇಶಕ್ಕೆ ಯಾವುದೇ ಆಸಕ್ತಿಯಿಲ್ಲ ಎಂದು ಕೆಲಿನ್ ಸಂದರ್ಶನದಲ್ಲಿ ತೀಕ್ಷ್ಣವಾಗಿ ಹೇಳಿದ್ದಾರೆ.
ರಷ್ಯಾದ ಗುಪ್ತಚರ ಇಲಾಖೆಯ ಭಾಗವೆಂದು ಆರೋಪಿಸಲಾಗಿರುವ ಎಪಿಟಿ29 ಎಂಬ ಹ್ಯಾಕರ್ಗಳ ಗ್ಯಾಂಗ್, ಕೋವಿಡ್-19 ಲಸಿಕೆ ಅಭಿವೃದ್ಧಿಯಲ್ಲಿ ತೊಡಗಿರುವ ಶೈಕ್ಷಣಿಕ ಮತ್ತು ಔಷಧೀಯ ಸಂಶೋಧನಾ ಸಂಸ್ಥೆಗಳ ಮೇಲೆ ಆಕ್ರಮಣ ಮಾಡಲು ದುರುದ್ದೇಶಪೂರಿತ ಹ್ಯಾಕಿಂಗ್ ಸಾಫ್ಟ್‌ವೇರ್ ಬಳಸುತ್ತಿದೆ ಎಂದು ಅಮೆರಿಕ, ಬ್ರಿಟನ್ ಮತ್ತು ಕೆನಡಾದಲ್ಲಿನ ಗುಪ್ತಚರ ಸಂಸ್ಥೆಗಳು ಕಳೆದ ಗುರುವಾರ ಆರೋಪಿಸಿತ್ತು. ಆದರೆ ಯಾವುದೇ ಉಪಯುಕ್ತ ಮಾಹಿತಿ ಕಳುವಾಗಿರುವ ಬಗ್ಗೆ ಇದು ಸ್ಪಷ್ಟವಾಗಿ ತಿಳಿಸಿಲ್ಲ.