ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವಿನ ಕದನ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈಗಾಗಲೇ ಅನೇಕರ ಪ್ರಾಣಪಕ್ಷಿ ಹಾರಿ ಹೋಗಿದೆ. ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಮರಿಯುಪೋಲ್ ನಗರದ ರಂಗ ಮಂದಿರದ ರಷ್ಯಾ ಬುಧವಾರ ಬಾಂಬ್ ದಾಳಿ ನಡೆಸಿದೆ. ಥಿಯೇಟರ್‌ನಲ್ಲಿದ್ದ ಜನರ ರಕ್ಷಣಾ ಕಾರ್ಯ ನಡೆಯುತ್ತಿದ್ದು, 1300 ಕ್ಕೂ ಹೆಚ್ಚು ನಾಗರಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉಕ್ರೇನ್ನ ಒಂಬುಡ್ಸ್‌ಮನ್ ಲ್ಯುಡ್ಮಿಲಾ ಡೆನಿಸೋವಾ ನೀಡಿರುವ ಮಾಹಿತಿ ಪ್ರಕಾರ, ರಷ್ಯಾ ದಾಳಿಯಿಂದ ಮರಿಯುಪೋಲ್ ಡ್ರಾಮಾ ಥಿಯೇಟರ್ ಅವಶೇಷಗಳಡಿ ಸಿಲುಕಿರುವ 130 ಜನರನ್ನು ರಕ್ಷಿಸಲಾಗಿದೆ. ಆದರೆ, ಇನ್ನೂ ಹೆಚ್ಚಿನ ಜನರು ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆ ಎಂದು ದಿ ಕೈವ್ ಇಂಡಿಪೆಂಡೆಂಟ್ ವರದಿ ಮಾಡಿದೆ ಅಂತಾ ತಿಳಿಸಿದ್ದಾರೆ.
ಉಕ್ರೇನ್‍ನ ಹಲವು ಜನ ಈ ಥಿಯೇಟರ್‌ನ ಅಂಡರ್ ಗ್ರೌಂಡ್‍ನಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗುರಿಯಾಗಿಸಿ ರಷ್ಯಾ ಸೇನೆ ದಾಳಿ ನಡೆಸಿದೆ. ನಾಶವಾದ ಕಟ್ಟಡದ ಚಿತ್ರವನ್ನು ಹಂಚಿಕೊಂಡಿರುವ ಮರಿಯುಪೋಲ್ ಸಿಟಿ ಕೌನ್ಸಿಲ್, ರಷ್ಯಾದ ಪಡೆಗಳು ಮರಿಯುಪೋಲ್ ಹೃದಯಭಾಗದಲ್ಲಿರುವ ನಾಟಕ ರಂಗಮಂದಿರವನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿವೆ ಎಂದು ಹೇಳಿದೆ.
ಥಿಯೇಟರ್ ಮೇಲೆ ಬಾಂಬ್ ದಾಳಿಯಾಗುತ್ತಿದ್ದಂತೆ ದಟ್ಟ ಹೊಗೆ ಬರಲಾರಂಭಿಸಿದೆ. ಸಾವು - ನೋವುಗಳ ಸಂಖ್ಯೆಯನ್ನು ಸ್ಥಳೀಯ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಇದನ್ನೂ ಓದಿ: ವರ್ಲ್ಡ್ ಹ್ಯಾಪಿನೆಸ್ ಪಟ್ಟಿ: ಫಿನ್ಲ್ಯಾಂಡ್ ಅತ್ಯಂತ 'ಸುಖಿ ದೇಶ', ಅಫ್ಘಾನಿಸ್ತಾನ 'ಅತೃಪ್ತಿಕರ' ದೇಶ