ನವದೆಹಲಿ: ಉಕ್ರೇನ್ ಮೇಲಿನ ಯುದ್ಧದ ಪರಿಣಾಮವಾಗಿ ವಿವಿಧ ರಾಷ್ಟ್ರಗಳು ರಷ್ಯಾ ಮೇಲೆ ನಿರ್ಬಂಧ ವಿಧಿಸಿವೆ. ಈ ನಿರ್ಬಂಧದಿಂದಾಗಿ ಅನೇಕ ಸರಕುಗಳನ್ನು ಪಡೆದುಕೊಳ್ಳಲು ರಷ್ಯಾಗೆ ಸಾಧ್ಯವಾಗುತ್ತಿಲ್ಲ. ಈ ಬೆನ್ನಲ್ಲೇ ರಷ್ಯಾ ಕೂಡಾ ಹೊಸ ತಂತ್ರ ಹೂಡಿದ್ದು, ಈ ಮೂಲಕ ನಿರ್ಬಂಧ ವಿಧಿಸಿದ ರಾಷ್ಟ್ರಗಳನ್ನು ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ದೂರಸಂಪರ್ಕ, ವೈದ್ಯಕೀಯ, ವಾಹನ, ಕೃಷಿ ಮತ್ತು ವಿದ್ಯುತ್ ಉಪಕರಣ ಮತ್ತು ಅರಣ್ಯ ಉತ್ಪನ್ನಗಳನ್ನು ರಪ್ತು ಮಾಡದಿರಲು ರಷ್ಯಾ ಮುಂದಾಗಿದೆ. ರಷ್ಯಾದ ಬಂದರುಗಳಲ್ಲಿ ವಿದೇಶಿ ಹಡಗುಗಳನ್ನು ನಿರ್ಬಂಧ ಹೇರಲಾಗುತ್ತದೆ ಎಂದು ರಷ್ಯಾದ ಆರ್ಥಿಕ ಸಚಿವಾಲಯ ಹೇಳಿದೆ.
ಪ್ರಸ್ತುತ ಕೆಲವು ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧಗಳ ಸರಮಾಲೆಯನ್ನೇ ವಿಧಿಸಿವೆ. ಅದರಲ್ಲಿ ವಿಶೇಷವಾಗಿ ತೈಲ ಖರೀದಿಸುವುದನ್ನು ಸ್ಥಗಿತಗೊಳಿಸಲಾಗಿದೆ. ರಷ್ಯಾದ ಮೇಲೆ ಹೇರಿದ ನಿರ್ಬಂಧಗಳಿಗೆ ಇದು ಪ್ರತಿಕ್ರಿಯೆಯಾಗಿದೆ. ಬೇರೆ ರಾಷ್ಟ್ರಗಳು ಸ್ನೇಹಪರವಲ್ಲದ ಕ್ರಮಗಳನ್ನು ಕೈಗೊಂಡಿವೆ ಎಂದು ರಷ್ಯಾ ಹೇಳಿದೆ.
ಇದನ್ನೂ ಓದಿ: ಉಕ್ರೇನ್ ನಿರಾಶ್ರಿತರಿಗೆ ನಾವು ಆಶ್ರಯ ನೀಡುತ್ತೇವೆ: ಕೆನಡಾ ಪ್ರಧಾನಿ ಅಭಯ
ಈಗ ರಷ್ಯಾ ಕೂಡಾ ರಫ್ತು ನಿರ್ಬಂಧಕ್ಕೆ ಮುಂದಾಗಿದ್ದು, ಈ ನೀತಿ ಯೂರೋಪಿಯನ್ ಯೂನಿಯನ್, ಅಮೆರಿಕ ಸೇರಿದಂತೆ 48 ದೇಶಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ರಷ್ಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿದೇಶಿ ಕಂಪನಿಗಳು ತಯಾರಿಸಿದ ಸರಕುಗಳ ಮೇಲೆಯೂ ರಫ್ತು ನಿಷೇಧ ಇರುತ್ತದೆ ಎಂದು ರಷ್ಯಾದ ಪ್ರಧಾನಿ ಮಿಖಾಯಿಲ್ ಮಿಶುಸ್ಟಿನ್ ಹೇಳಿದ್ದಾರೆ ಹೇಳಿದ್ದಾರೆ.
ರಷ್ಯಾದಿಂದ ಹೊರನಡೆದ ಬೇರೆ ರಾಷ್ಟ್ರಗಳ ಕಂಪನಿಗಳ ಒಡೆತನದಲ್ಲಿರುವ ಆಸ್ತಿಯನ್ನು ರಾಷ್ಟ್ರೀಕರಣಗೊಳಿಸಬಹುದು ಎಂದು ರಷ್ಯಾದ ಮಾಜಿ ಅಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಎಚ್ಚರಿಸಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಕ್ಯಾಟರ್‌ಪಿಲ್ಲರ್, ರಿಯೊ ಟಿಂಟೊ, ಸ್ಟಾರ್‌ಬಕ್ಸ್, ಸೋನಿ, ಯೂನಿಲಿವರ್ ಮತ್ತು ಗೋಲ್ಡ್‌ಮನ್ ಸ್ಯಾಚ್ಸ್‌ನಂತಹ ಕಂಪನಿಗಳು ಹೊರನಡೆಯುವ ಸಾಧ್ಯತೆ ಇದೆ.