ಲಂಡನ್: ಅಪರಿಚಿತ ಭಾರತೀಯ ರಾಜವಂಶದ ಖಜಾನೆಯಿಂದ ಅಪರೂಪದ ವಜ್ರ ಮತ್ತು ಪಚ್ಚೆ ಹಸಿರು ಕನ್ನಡಕವನ್ನು ಈ ತಿಂಗಳ ಕೊನೆಯಲ್ಲಿ ಲಂಡನ್‌ನಲ್ಲಿ ಹರಾಜು ಮಾಡಲಾಗುತ್ತದೆ. ಮೊಘಲರ ಕಾಲದ ಕನ್ನಡಕದ ಫ್ರೇಮ್ನಲ್ಲಿ 1890 ರಲ್ಲಿ ಲೆನ್ಸ್ಗಳನ್ನು ಹಾಕಲಾಗಿದೆ. ಈ ಕನ್ನಡಕ ಹರಾಜಿನಲ್ಲಿ ಸುಮಾರು 15 ಕೋಟಿಯಿಂದ 25 ಕೋಟಿ ರೂಪಾಯಿಗೂ ಹೆಚ್ಚು ಮಾರಾಟವಾಗುವ ಸಾಧ್ಯತೆಯಿದೆ ಎಂದು ಸೋಥೆಬಿಸ್ ಹರಾಜು ಸಂಸ್ಥೆ ತಿಳಿಸಿದೆ.
ಈ ಕನ್ನಡಕ ಮಾರಾಟ ಮಾಡುವ ಮೊದಲು ಹಾಂಗ್ ಕಾಂಗ್ ಮತ್ತು ಲಂಡನ್‌ನಲ್ಲಿ ಪ್ರದರ್ಶಿಸಲಾಗುತ್ತದೆ. ಈ ಕನ್ನಡಕವನ್ನು ಯಾರು ತಯಾರಿಸಿದ್ದರು ಎಂಬುದು ಅಸ್ಪಷ್ಟವಾಗಿದೆ. ಆದರೆ ಆ ವಜ್ರ ಖಚಿತ ಕನ್ನಡಕ 16 ಮತ್ತು 17 ನೇ ಶತಮಾನಗಳಲ್ಲಿ ಉಪಖಂಡವನ್ನು ಆಳಿದ ಮತ್ತು ಶ್ರೀಮಂತ ಕಲಾತ್ಮಕ ಹಾಗೂ ವಾಸ್ತುಶಿಲ್ಪದ ಸಾಧನೆಗಳಿಗೆ ಹೆಸರುವಾಸಿಯಾದ ರಾಜವಂಶದ ಮೊಘಲರಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.
ಈ ಕನ್ನಡಕ್ಕೆ ಅಳವಡಿಸಿರುವ ಗ್ಲಾಸ್ಗಳು ಒಂದೇ ನೈಸರ್ಗಿಕ ವಜ್ರದಿಂದ ತಯಾರಿಸಲಾಗಿದೆ. ಸಾಮಾನ್ಯ ಮಸೂರಗಳು (ಗ್ಲಾಸ್ಗಳು) ಕೇವಲ ದೃಷ್ಟಿ ಸುಧಾರಿಸಲು ಮಾತ್ರ ಕಾರ್ಯನಿರ್ವಹಿಸುತ್ತವೆ. ಆದ್ರೆ ಈ ಪಚ್ಚೆ ಹಸರಿನ ವಜ್ರದ ಹಳ್ಳುಗಳು ಆಧ್ಯಾತ್ಮಿಕ ಜ್ಞಾನೋದಯಕ್ಕೆ ಸಹಾಯಕವಾಗಿವೆ. ಈ ವಜ್ರಗಳು ಹೊಳೆಯುತ್ತವೆ ಎಂದು ಭಾವಿಸಲಾಗಿದೆ. ಪಚ್ಚೆ ಹಸರಿನ ವಜ್ರಗಳು ಕೆಟ್ಟದ್ದನ್ನು ತಡೆಯಲು ಪವಾಡದ ಶಕ್ತಿಯನ್ನು ಹೊಂದಿವೆ ಎಂದು ನಂಬಲಾಗಿದೆ. ಇದೇ ತಿಂಗಳಿನ ಕೊನೆಯಲ್ಲಿ ಅಂದ್ರೆ ಅಕ್ಟೋಬರ್ 27ರಂದು ಈ ಕನ್ನಡಕದ ಹರಾಜು ಪ್ರಕ್ರಿಯೆ ಪ್ರಾರಂಭಗೊಳ್ಳುತ್ತೆ ಎಂದು ಸೋಥೆಬಿಸ್ ಹೇಳಿದೆ.