ಲಿಸ್ಬನ್ (ಪೋರ್ಚುಗಲ್): ಕೊರೊನಾದಿಂದ ತೀವ್ರವಾಗಿ ಬಳಲುತ್ತಿರುವ ದೇಶಗಳಿಗೆ ಪ್ರಯಾಣ ನಿರ್ಬಂಧವನ್ನು ಹೇರಿದ್ದ ಪೋರ್ಚುಗೀಸ್ ಸರ್ಕಾರ ಮೇ 16ರವರೆಗೆ ಅವಧಿ ವಿಸ್ತರಿಸಿದೆ.
ಆದರೆ ವೃತ್ತಿಪರ, ಅಧ್ಯಯನ, ಕುಟುಂಬ ಪುನರ್ಮಿಲನ, ಆರೋಗ್ಯ ಮತ್ತು ಮಾನವೀಯ ಕಾರಣಗಳು ಸೇರಿದಂತೆ ಅಗತ್ಯತೆಗಳನ್ನು ಗಮನದಲ್ಲಿರಿಸಿ ಕೆಲವರಿಗೆ ಮಾತ್ರ ಪ್ರಯಾಣ ಬೆಳೆಸಲು ಅವಕಾಶ ನೀಡಲಾಗಿದೆ.
ಸೈಪ್ರಸ್, ಕ್ರೊಯೇಷಿಯಾ, ಬ್ರೆಜಿಲ್, ಭಾರತ, ಫ್ರಾನ್ಸ್, ಲಿಥುವೇನಿಯಾ, ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ ಮತ್ತು ಸ್ವೀಡನ್ ಮುಂತಾದ ದೇಶಗಳಿಗೆ ವಿಮಾನಯಾನವನ್ನು ನಿರ್ಬಂಧಿಸಲಾಗಿದೆ. ಇನ್ನು ಈ ಆದೇಶದ ಬಳಿಕ ಪ್ರಯಾಣಿಕರು ಆಗಮಿಸಿದ್ದಲ್ಲಿ ಅವರಿಗೆ 14 ದಿನಗಳ ಕಡ್ಡಾಯ ಕ್ವಾರಂಟೈನ್ ವಿಧಿಸಲಾಗುತ್ತದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.
2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಹೊರತುಪಡಿಸಿ, ವಿಮಾನದ ಮೂಲಕ ಪೋರ್ಚುಗಲ್‌ಗೆ ಆಗಮಿಸುವ ಯಾವುದೇ ಪ್ರಯಾಣಿಕರು ನಿರ್ಗಮನಕ್ಕೆ 72 ಗಂಟೆಗಳ ಮೊದಲು ನಡೆಸುವ ನೆಗೆಟಿವ್ COVID-19 PCR (ಪಾಲಿಮರೇಸ್ ಚೈನ್ ರಿಯಾಕ್ಷನ್) ವರದಿಯನ್ನು ಪ್ರಸ್ತುತಪಡಿಸಬೇಕು ಎಂದು ಸಚಿವಾಲಯ ತಿಳಿಸಿದೆ.