ಇಸ್ಲಾಮಾಬಾದ್ : ರಾಷ್ಟ್ರೀಯ ಗುಪ್ತಚರ ಸಮನ್ವಯ ಸಮಿತಿ (ಎನ್‌ಐಸಿಸಿ) ಸ್ಥಾಪನೆಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅನುಮೋದನೆ ನೀಡಿದ್ದಾರೆ ಎಂದು ಪಾಕ್ನ ಹಿರಿಯ ಭದ್ರತಾ ಮೂಲಗಳು ತಿಳಿಸಿವೆ.
ಈ ನೂತನ ಸಂಸ್ಥೆಯನ್ನು ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಮಹಾನಿರ್ದೇಶಕರು ನಿರ್ವಹಿಸಲಿದ್ದು, ಇವರೇ ಇದರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಅಲ್ಲಿನ ಪತ್ರಿಕೆಯೊಂದು ಮಂಗಳವಾರ ವರದಿ ಮಾಡಿದೆ.
ಈ ವಿಷಯದ ಬಗ್ಗೆ ಗುಪ್ತಚರ ಸಂಸ್ಥೆಗಳು ಮೊದಲು ಎರಡು ಸುತ್ತಿನ ಚರ್ಚೆಗಳನ್ನು ನಡೆಸಿ ನಂತರ ಪ್ರಧಾನಮಂತ್ರಿಗೆ ಅನುಮೋದನೆಗಾಗಿ ಪ್ರಸ್ತಾವನೆಯನ್ನು ಸಲ್ಲಿಸಿವೆ. ಸಮನ್ವಯ ಮಂಡಳಿಯ ಮೊದಲ ಸಭೆ ಮುಂದಿನ ವಾರ ನಡೆಯುವ ನಿರೀಕ್ಷೆಯಿದೆ.
ರಾಷ್ಟ್ರೀಯ ಗುಪ್ತಚರ ಸಮನ್ವಯ ಸಮಿತಿಯು ದೇಶದಲ್ಲಿರುವ ಹಲವು ಗುಪ್ತಚರ ಸಂಘಟನೆಗಳನ್ನು ಹೆಚ್ಚು ಚೈತನ್ಯ ನೀಡುವ ದೃಷ್ಟಿಯನ್ನಿಟ್ಟುಕೊಂಡು ಕಾರ್ಯನಿರ್ವಹಿಸಲಿದೆ ಎಂದು ಅಲ್ಲಿನ ಅಧಿಕಾರಿಗಳ ವರ್ಗ ತಿಳಿಸಿದೆ.
ರಾಷ್ಟ್ರೀಯ ಗುಪ್ತಚರ ಸಮನ್ವಯ ಸಮಿತಿ ಸ್ಪಷ್ಟವಾದ ಒಂದು ರೂಪ ಪಡೆದುಕೊಂಡ ಮೇಲೆ, ಅದು ದೇಶದಲ್ಲಿ ಯಾವ ರೀತಿ ಕಾರ್ಯ ವಿಧಾನವನ್ನ ಹೊಂದಬೇಕು ಮತ್ತು ನೀತಿ ನಿರೂಪಣೆಗಳೇನು ಅನ್ನೋದರ ಕುರಿತಂತೆ ನಿರ್ಧಾರವಾಗಲಿದೆ ಎಂದು ಮೂಲಗಳು ತಿಳಿಸಿವೆ.
ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಪಡೆ ಸಹ ಹೊಸದಾಗಿ ರೂಪಗೊಳ್ತಿರುವ ಎನ್‌ಐಸಿಸಿಯ ಒಂದು ಭಾಗವಾಗಿ ಕೆಲಸ ಮಾಡಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ದೇಶದೊಳಗಿನ ಆಂತರಿಕ ಸಮನ್ವಯತೆಯ ಕೊರತೆಯಿಂದಾಗಿ ಪಾಕ್‌ನೊಳಗೆ ಪದೇಪದೆ ನಡೆಯೋ ಭಯೋತ್ಪಾದನಾ ಕೃತ್ಯಗಳನ್ನ ತಡೆಯುವಲ್ಲಿ ಸಾಧ್ಯವಾಗುತ್ತಿಲ್ಲ.
ಈ ಎಲ್ಲ ಕೊರತೆಗಳನ್ನ ಮೆಟ್ಟಿ ಭಯೋತ್ಪದನಾ ಕೃತ್ಯಗಳ ನಿಯಂತ್ರಣದಲ್ಲಿ ರಾಷ್ಟ್ರೀಯ ಗುಪ್ತಚರ ಸಮನ್ವಯ ಸಮಿತಿ ಮಹತ್ವದ ಹೆಜ್ಜೆಯನ್ನ ಇರಿಸುವ ನಿರೀಕ್ಷೆ ಹೊಂದಲಾಗಿದೆ.