ಲಂಡನ್: ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ಸಂಭಾವ್ಯ ಕೋವಿಡ್- 19 ಲಸಿಕೆಯ ಮಾನವ ಪ್ರಯೋಗ ಗುರುವಾರದಿಂದ ಪ್ರಾರಂಭವಾಗಲಿದೆ ಎಂದು ಯುಕೆ ಸರ್ಕಾರ ಪ್ರಕಟಿಸಿದೆ.
ಕಳೆದ ವಾರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಧ್ಯಮಗೋಷ್ಟಿಯಲ್ಲಿ ಸೂಪರ್-ಫಾಸ್ಟ್ ಲಸಿಕೆ ನೀಡುವ ಭರವಸೆ ನೀಡಿದ್ದು, ಸೆಪ್ಟಂಬರ್ ವೇಳೆಗೆ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ. ಅವರ ‘ChAdOx1’ ಹಾಗೂ SARS-CoV-2 ಎಂಬ ಲಸಿಕೆ ಕೊರೊನಾ ವೈರಸ್ ವಿರುದ್ಧ ಕೆಲಸ ಮಾಡುತ್ತದೆ ಎಂದು ಪ್ರಮುಖ ಸಂಶೋಧಕ ಪ್ರೊಫೆಸರ್ ಸಾರಾ ಗಿಲ್ಬರ್ಟ್ ಅಭಿಪ್ರಾಯಪಟ್ಟಿದ್ದಾರೆ.
ಆಕ್ಸ್‌ಫರ್ಡ್ ಸಂಶೋಧನಾ ತಂಡಕ್ಕೆ ಹಾಗೂ ಅವರ ಕ್ಲಿನಿಕಲ್ ಪ್ರಯೋಗಗಳಿಗೆ ಧನಸಹಾಯ ನೀಡಲು ಸರ್ಕಾರವು 20 ಮಿಲಿಯನ್ ಪೌಂಡ್‌ಗಳನ್ನು ಒದಗಿಸುತ್ತದೆ ಮತ್ತು ಲಂಡನ್‌ನ ಇಂಪಿರಿಯಲ್ ಕಾಲೇಜಿನ ಸಂಶೋಧಕರಿಗೆ ಇನ್ನೂ 22.5 ಮಿಲಿಯನ್ ಪೌಂಡ್‌ಗಳನ್ನು ಒದಗಿಸುತ್ತದೆ ಎಂದು ಯುಕೆ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾನ್‌ಕಾಕ್ 10 ಡೌನಿಂಗ್ ಸ್ಟ್ರೀಟ್‌ನಲ್ಲಿ ನಡೆದ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದಾರೆ.
ಆ ಪ್ರಯೋಗ ಪ್ರಕ್ರಿಯೆಯನ್ನು ತಂಡವು ಈಗಾಗಲೇ ಚುರುಕುಗೊಳಿಸಿದ್ದು, ನಿಯಂತ್ರಕ ಎಂಹೆಚ್‌ಆರ್‌ಎ (ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ರೆಗ್ಯುಲೇಟರಿ ಏಜೆನ್ಸಿ) ಯೊಂದಿಗೆ ಕೆಲಸ ಮಾಡುತ್ತಿದೆ. ಅಲ್ಲದೇ ಅವರು ಅದ್ಭುತವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಪರಿಣಾಮವಾಗಿ, ಆಕ್ಸ್‌ಫರ್ಡ್ ಯೋಜನೆಯ ಲಸಿಕೆಯನ್ನು ಈ ಗುರುವಾರದಿಂದಲೇ ಜನರಲ್ಲಿ ಪ್ರಯೋಗಿಸಲಾಗುವುದು ಎಂದು ಘೋಷಿಸಿದ್ದಾರೆ.