ಲಂಡನ್: ಭಾರತ ಸರ್ಕಾರದ ಮೂರು ಕೃಷಿ ಕಾನೂನೂಗಳ ವಿರುದ್ಧ ದೆಹಲಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ವಿಚಾರದಲ್ಲಿ ಇಂಗ್ಲೆಂಡ್ನ ಶಾಸಕರ ಚರ್ಚೆಯನ್ನು ಲಂಡನ್ನಲ್ಲಿರುವ ಭಾರತದ ಹೈಕಮಿಷನ್ ಖಂಡಿಸಿದೆ.
ಭಾರತದಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಪತ್ರಿಕಾ ಸ್ವಾತಂತ್ರ್ಯದ ಹಕ್ಕು ಕುರಿತು 10,000ಕ್ಕೂ ಹೆಚ್ಚು ಸಹಿಯುಳ್ಳ ಇ - ಅರ್ಜಿ (ಆನ್ಲೈನ್ ಅರ್ಜಿ)ಯ ಬಗ್ಗೆ ಬ್ರಿಟಿಷ್ ಸಂಸತ್ತಿನಲ್ಲಿ ಕೆಲ ಶಾಸಕರು ನಿನ್ನೆ ಸಂಜೆ ಚರ್ಚೆ ನಡೆಸಿದ್ದಾರೆ. ಈ ಅರ್ಜಿಯನ್ನು ಹೌಸ್ ಆಫ್ ಕಾಮನ್ಸ್ ಪೆಟಿಷನ್ ಕಮಿಟಿ ಅನುಮೋದಿಸಲಿದೆ.
ಕೃಷಿ ಕಾಯ್ದೆಗಳು 'ದೇಶೀಯ ವಿಷಯ'. ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಸಹಕಾರವು ಅನೇಕ ಜಾಗತಿಕ ಸಮಸ್ಯೆಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆ ಎಂದು ಈ ಹಿಂದೆ ಬ್ರಿಟನ್ ಸರ್ಕಾರ ಹೇಳಿತ್ತು. ಆದರೆ, ಅರ್ಜಿಯ ಕುರಿತ ಚರ್ಚೆಗೆ ಭಾರತೀಯ ಹೈಕಮಿಷನ್ ಅಸಮಾಧಾನ ವ್ಯಕ್ತಪಡಿಸಿದೆ. ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದ ಬಗೆಗಿನ ಶಾಸಕರ ಚರ್ಚೆಯು ಏಕಪಕ್ಷೀಯ ಹಾಗೂ ಸುಳ್ಳು ಪ್ರತಿಪಾದನೆಗಳಾಗಿವೆ ಎಂದು ಹೈಕಮಿಷನ್ ಆರೋಪಿಸಿದೆ.
ದೆಹಲಿಯಲ್ಲಿ ಜನವರಿ 26ರ ಗಣರಾಜ್ಯೋತ್ಸವ ದಿನದಂದು ನಡೆದಿದ್ದ ಟ್ರ್ಯಾಕ್ಟರ್ ರ‍್ಯಾಲಿ ಹಿಂಸಾತ್ಮಕ ರೂಪ ಪಡೆದಿತ್ತು. ಕೆಂಪು ಕೋಟೆಗೆ ಮುತ್ತಿಗೆ ಹಾಕಿದ್ದ ಪ್ರತಿಭಟನಾನಿರತ ರೈತರು, ಕೋಟೆ ಮೇಲೆ ಧ್ವಜ ಹಾರಿಸಿದ್ದರು. ಪೊಲೀಸರ ಮೇಲೆಯೇ ಹಲ್ಲೆ ನಡೆದಿತ್ತು. ಪ್ರತಿಭಟನೆಗೆ ಪ್ರಚೋದನೆ ನೀಡುವಂತಹ ಸುದ್ದಿ ಪ್ರಸಾರ ಮಾಡಿದ ಆರೋಪದಡಿ ಕೆಲ ಪತ್ರಕರ್ತರ ವಿರುದ್ಧ ಕೇಸ್ ದಾಖಲಾಗಿತ್ತು.