ಜಿನೀವಾ: 2022 ಆರಂಭವಾಗುತ್ತಿದ್ದಂತೆ ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನ ಹೊಸ ಅಲೆ ಹರಡುವ ಭೀತಿ ಕಾಡುತ್ತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥರು ಒಮಿಕ್ರಾನ್ಸೋಂಕಿನ ಕುರಿತಾದ ಮತ್ತಷ್ಟು ಮಾಹಿತಿ ನೀಡಿದ್ದಾರೆ.
ವಿಶ್ವದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಏರಿಕೆ ಆಗುತ್ತಿದೆ. ಈ ಹಿನ್ನೆಲೆ ಅನೇಕ ರಾಷ್ಟ್ರಗಳಲ್ಲಿ ಕೋವಿಡ್ ನಿಯಮಗಳನ್ನು ಕಠಿಣಗೊಳಿಸಲಾಗಿದೆ. ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ಮತ್ತು ಸೋಂಕಿತರು ಸಾವನ್ನಪ್ಪುತ್ತಿರುವುದರಿಂದ ಒಮಿಕ್ರಾನ್ ರೂಪಾಂತರಿ ಕೇವಲ ಸೌಮ್ಯ ಕಾಯಿಲೆ ಎಂದು ಸೂಚಿಸುವುದು ಅಪಾಯಕಾರಿ. ಜಾಗರೂಕರಾಗಿರಿ ಅಂತಾ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಹೆಚ್‌ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಗುರುವಾರ ಹೇಳಿದ್ದಾರೆ.
ಡೆಲ್ಟಾಕ್ಕೆ ಹೋಲಿಸಿದರೆ ಒಮಿಕ್ರಾನ್ ಕಡಿಮೆ ತೀವ್ರವಾಗಿರುವಂತೆ ಕಂಡು ಬಂದಿದೆ. ಆದರೂ ಸಹ ಇದು ಸೌಮ್ಯ ಲಕ್ಷಣಗಳನ್ನು ಹೊಂದಿದೆ ಎಂದು ವರ್ಗೀಕರಿಸಬಾರದು. ಈ ಹಿಂದಿನ ರೂಪಾಂತರಿಗಳಂತೆ ಒಮಿಕ್ರಾನ್ ಸಹ ಜನರನ್ನು ಕಾಡುತ್ತಿದೆ. ಹೆಚ್ಚು ಜನರಿಗೆ ಸೋಂಕು ತಗುಲುತ್ತಿರುವುದಲ್ಲದೇ, ಅನೇಕರು ಸಾವನ್ನಪ್ಪುತ್ತಿದ್ದಾರೆ ಎಂದು ಟೆಡ್ರೊಸ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಓದಿ: Jammu Encounter: ಮೂವರು ಉಗ್ರರ ಹೊಡೆದುರುಳಿಸಿದ ಭದ್ರತಾ ಪಡೆ
ನಂತರ ಮಾತನಾಡಿದ ವಿಶ್ವ ಆರೋಗ್ಯಸಂಸ್ಥೆಯ ಕೋವಿಡ್ -19 ತಾಂತ್ರಿಕ ಮುಖ್ಯಸ್ಥರಾದ ಮಾರಿಯಾ ವ್ಯಾನ್ ಕೆರ್ಖೋವ್, ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಸೇರಿದಂತೆ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಒಮಿಕ್ರಾನ್ ರೂಪಾಂತರದಿಂದ ಉಂಟಾದ ಕೋವಿಡ್ ಪ್ರಕರಣಗಳ ಹೊಸ ಉಲ್ಭಣದ ವಿರುದ್ಧ ಕ್ರಮಗಳನ್ನು ಹೆಚ್ಚಿಸಲು ವಿಶ್ವ ಆರೋಗ್ಯ ಸಂಸ್ಥೆ ಹಲವಾರು ಸಂದರ್ಭಗಳಲ್ಲಿ ಸರ್ಕಾರಗಳಿಗೆ ಎಚ್ಚರಿಕೆ ನೀಡಿದೆ. ಇದನ್ನು ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.
WHO ಪ್ರಕಾರ, ಕಳೆದ ವಾರದಲ್ಲಿ ಪ್ರಪಂಚದಲ್ಲಿ 9.5 ದಶಲಕ್ಷಕ್ಕೂ ಹೆಚ್ಚು ಕೊರೊನಾ ವೈರಸ್ ಪ್ರಕರಣಗಳನ್ನು ವರದಿ ಮಾಡಲಾಗಿದೆ. 2021 ರ ಡಿಸೆಂಬರ್ 27 ರಿಂದ ಈ ವರ್ಷದ ಜನವರಿ 2 ರವರೆಗೆ 41,000 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು WHO ಹೇಳಿದೆ.
ಓದಿ: ಕೇವಲ 10 ದಿನಗಳಲ್ಲಿ 9 ಸಾವಿರದಿಂದ ಲಕ್ಷಕ್ಕೆ ಏರಿಕೆ ಕಂಡ ಕೋವಿಡ್ ಪ್ರಕರಣಗಳು... ಹೊಸ ತಳಿಗೆ ತತ್ತರಿಸುತ್ತಿರುವ ದೇಶ!